

ವಿರಾಜಪೇಟೆ: ಧನ ಸಂಪಾದನೆಯೊಂದಿಗೆ ಗುಣ ಸಂಪಾದನೆಗೂ ಗಮನ ನೀಡಬೇಕು ಎಂದು ವಿರಾಜಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಪ್ರಣವ್ ಎಂ. ಚಿತ್ರಭಾನು ಹೇಳಿದರು. ಸಮೀಪದ ಬಿ. ಶೆಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವೇರಿ ಪದವಿ ಕಾಲೇಜಿನ ಎನ್ನೆಸ್ಸೆಸ್
ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಯುವಜನರು ಸಮಾಜ ಸೇವಾ ಚಟುವಟಿಕೆಗೆ ಮುಂದಾಗಬೇಕು. ಯಾವುದೇ ಹಣ, ಆಭರಣ, ಸಂಪತ್ತು ನೀಡುವ ಖುಷಿಗಿಂತ ಹೆಚ್ಚಿನ ಧನ್ಯತೆಯು ಸಮಾಜಸೇವಾ ಕಾರ್ಯದಲ್ಲಿ ಲಭ್ಯವಾಗುತ್ತದೆ ಎಂದು ಅವರು ಹೇಳಿದರು. ಮನುಷ್ಯನು ಎಲ್ಲವನ್ನೂ ಸಮಾಜದಿಂದ ಸಂಪಾದಿಸುತ್ತಾನೆ. ಸಂಪಾದಿಸಿದ ಸಂಪತ್ತಿನ ಅಲ್ಪ ಭಾಗವನ್ನಾದರೂ ಇತರರಿಗೆ ದಾನ ನೀಡಿದರೆ ಜನ್ಮ ಸಾರ್ಥಕವಾಗುತ್ತದೆ ಎಂದವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಾಯಕತ್ವ ಗುಣ ಬೆಳೆಯುತ್ತದೆ : ಬಿ. ಶೆಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸುಜಾತಾ ಮಾತನಾಡಿ ಎನ್ನೆಸ್ಸೆಸ್ ಶಿಬಿರಗಳು ಯುವಜನರಲ್ಲಿ ನಾಯಕತ್ವ ಗುಣ ಬೆಳೆಸುತ್ತವೆ ಎಂದರು. ನಾವು ಕೇವಲ ಮುಖಂಡರಾದರೆ ಸಾಲದು. ಉತ್ತಮ ಗುಣಗಳನ್ನೂ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಲು ಯತ್ನ ಮಾಡಬೇಕು. ಗುರು, ಹಿರಿಯರಿಗೆ, ಹೆತ್ತವರಿಗೆ ಸಹಕಾರಿಯಾಗಿ ಬದುಕಿದವರು ಸಮಾಜಕ್ಕೂ ಒಂದು ಆಸ್ತಿಯಾಗುತ್ತಾರೆ ಎಂದವರು ನುಡಿದರು.
ಕಲಿಕೆ ನಿರಂತರವಾಗಿರಲಿ: ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ತೀತಿಮಾಡ ಲಾಲ ಭೀಮಯ್ಯ ಮಾತನಾಡಿ ಸೇವೆ, ಕಲಿಕೆ ಎಂಬುದು ಕೇವಲ ಶಿಬಿರಕ್ಕೆ ಮಾತ್ರ ಸೀಮಿತವಾಗಬಾರದು. ಅದು ಜೀವನಪೂರ್ಣ ನಿರಂತರವಾಗಿರಲಿ ಎಂದು ಆಶಿಸಿದರು. ಶಿಸ್ತು ಬಹು ಮುಖ್ಯ: ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಮಂಡೇಪಂಡ ಎಸ್. ಮುತ್ತಣ್ಣ ಮಾತನಾಡಿ, ಜೀವನದಲ್ಲಿ ಶಿಸ್ತು ಎಂಬುದು ಮುಖ್ಯ ಎಂದರು. ಆರಂಭಿಕ ಹಂತದಿಂದಲೇ ಗುರಿ ಮತ್ತು ಶಿಸ್ತನ್ನು ರೂಢಿಸಿಕೊಂಡವರು ಉತ್ತಮ ನಾಯಕರಾಗುತ್ತಾರೆ. ಇದಕ್ಕೆ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ, ಆರ್.ಕೆ. ನಾರಾಯಣನ್ ಅವರೇ ದೊಡ್ಡ ಉದಾಹರಣೆ ಎಂದರು. ಕಾವೇರಿ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ವೀಣಾ, ಎನ್ನೆಸ್ಸೆಸ್ ಯೋಜನಾಧಿಕಾರಿ ಸುನಿಲ್ ಕುಮಾರ, ಸಹ ಶಿಬಿರಾಧಿಕಾರಿ ಅನುಪಮಾ, ಸ್ಥಳೀಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಸುಜೋತಿ, ಮುಖಂಡರಾದ ಸುರೇಶ, ರಜನೀಶ ಇತರರು ಇದ್ದರು.