

ವಿರಾಜಪೇಟೆ: ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪಂಜರಪೇಟೆಯಲ್ಲಿ ೭೫ ಅಡಿ ಎತ್ತರಕ್ಕೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಗಮನ ಸೆಳೆಯಲಾಗಿದೆ. ವಿರಾಜಪೇಟೆಯ ಯುವ ಸಮೂಹ, ಪಂಜರಪೇಟೆಯ ಯುವ ತಂಡ ಹಾಗೂ ಕೊಡಗು ಯುವ ಸೇನೆ ನೇತೃತ್ವದಲ್ಲಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಂಜರಪೇಟೆಯ ಯುವತಂಡ ೭೫ನೇ ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ ೭೫ ಅಡಿ ಎತ್ತರಕ್ಕೆ ಕ್ರೇನ್ ಮೂಲಕ ಬೃಹತ್ ಭಾರತ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ ಅಮೃತ ಮಹೋತ್ಸವದ ಅಭಿಮಾನ ಮೆರೆದರು.
ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಸ್ಪಂದಿಸಿ ಹರ್ ಘರ್ ತಿರಂಗಾ ಅಭಿಯಾನ, ವಾಹನ ಜಾಥಾ, ಬೈಕ್ ಜಾಥಾ ಮೂಲಕ ಅಮೃತ ಮಹೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಯುವ ಸಮೂಹ ಸೋಮವಾರ ಪಂಜರ್‌ಪೇಟೆಯಲ್ಲಿ ಬೃಹತ್ ಧ್ವಜ ಹಾರಿಸುವ ಮೂಲಕ ವಿಭಿನ್ನವಾಗಿ ಸ್ವಾತಂತ್ರೋತ್ಸವ ಆಚರಿಸಿದರು.
ಕೊಡಗು ಯುವ ಸೇನೆ ಸ್ಥಾಪಕ ಕುಲದೀಪ್ ಪೂಣಚ್ಚ ಮಾತನಾಡಿ, ಕೇಂದ್ರದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೋಡುತ್ತಿದ್ದೇವೆ. ಮುಂದಿನ ದಿನದಲ್ಲಿ ದೇಶದಲ್ಲಿ ಭ್ರಷ್ಟಾಚಾರ ಸಂಪೂರ್ಣ ಮುಕ್ತಗೊಂಡು, ಪ್ರತಿಯೊಬ್ಬ ಭಾರತೀಯರಿಗೂ ಸಕಲ ಸವಲತ್ತು- ಸೌಲಭ್ಯ ದೊರೆಯು ವಂತಾಗಬೇಕೆಂದರು.
ಪಂಜರಪೇಟೆ ಯುವ ತಂಡದ ಪ್ರಮುಖರಾದ ಗಗನ್ ಪೂಜಾರಿ, ಪ್ರದೀಪ್ ರೈ, ಸುಧೀ ಪೂವಣ್ಣ, ಕೊಡಗು ಯುವ ಸೇನೆ ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ, ಬಿಜೆಪಿ ಯುವ ಮೋರ್ಚಾ ವಿರಾಜಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಸಿ. ಭರತ್ ಮತ್ತಿತರರು ಇದ್ದರು.