

ಅಜ್ಜಮಾಡ ರಮೇಶ್ ಕುಟ್ಟಪ್ಪ ವಿರಾಜಪೇಟೆ
ಮಲಬಾರ್ ರಸ್ತೆ ಬದಿ ನಿರ್ಮಿಸಿರುವ ವಾಣಿಜ್ಯ ಕಟ್ಟಡಕ್ಕೆ ಅನುಮತಿ ಇಲ್ಲದೆ ಕೋಟ್ಯಂತರ ರೂಪಾಯಿ ವಿನಿಯೋಗಿಸಿರುವುದನ್ನು ಕರ್ನಾಟಕ ಲೋಕಾಯುಕ್ತ ತನಿಖೆಗೆ ಒಪ್ಪಿಸಲು ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘದ ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಹಕಾರ ಮಾರಾಟ ಸಂಘದ ಅಧ್ಯಕ್ಷ ಕಂಜಿತಂಡ ಕೆ. ಮಂದಣ್ಣ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿರಾಜಪೇಟೆ ಮಹಿಳಾ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ವಾಣಿಜ್ಯ ಕಟ್ಟಡಕ್ಕೆ ಸಂಬಂಧಿಸಿದ್ದಂತೆ ತನಿಖಾ ಸಮಿತಿ ವರದಿ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಈ ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ನಿರ್ಮಾಣಗೊಂಡಿರುವ ವಾಣಿಜ್ಯ ಕಟ್ಟಡಕ್ಕೆ ಒಟ್ಟು ೪.೬೦ ಕೋಟಿ ರೂಪಾಯಿ ವೆಚ್ಚ ಮಾಡ ಲಾಗಿದೆ. ಈ ಪೈಕಿ ೨.೬೨ ಕೋಟಿ ರೂ. ಮೊತ್ತದ ಕಾಮಗಾರಿಗೆ ಮಾತ್ರ ಸಹಕಾರ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಲಾಗಿತ್ತು.
ಕಾಂಕ್ರೀಟ್ ಕಾಮಗಾರಿ ಮಾತ್ರ ಗುತ್ತಿಗೆ ನೀಡಲಾಗಿತ್ತು. ಇತರೆ ಜವಾಬ್ದಾರಿಯನ್ನು ಸಂಘವೇ ನಿರ್ವಹಿಸಿತ್ತು. ಅನುಮತಿ ಪಡೆಯದಿರುವುದು ಹಾಗೂ ಹಣ ವಿನಿಯೋಗದ ಖರ್ಚು ವೆಚ್ಚ ದಾಖಲಾತಿ ಇಲ್ಲದಿರುವುದು ತನಿಖಾ ಸಮಿತಿ ವರದಿಯಲ್ಲಿ ಉಲ್ಲೇಖಿತವಾಗಿದೆ. ತನಿಖಾ ವರದಿ ಯಲ್ಲಿ ಪ್ರಸ್ತಾಪವಾದ ವಿಚಾರ ಕುರಿತು ಸಭೆಯಲ್ಲಿ ಹಲವು ಸದಸ್ಯರು ಗಮನ ಸೆಳೆದರು.
ತನಿಖಾ ಸಮಿತಿ ಸದಸ್ಯರಾದ ಚೇಂದ್ರಿಮಾಡ ಗಣೇಶ್ ನಂಜಪ್ಪ, ಮಾದಂಡ ಎಸ್. ಪೂವಯ್ಯ, ಕಾಂಡಂಡ ಚರ್ಮಣ್ಣ ತನಿಖೆ ವೇಳೆ ಕಂಡು ಬಂದ ವಿಚಾರಗಳನ್ನು ಸಭೆ ಮುಂದಿಟ್ಟರು. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ್ದಂತೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆದ ವೇಳೆ ಬಹುತೇಕ ನಿರ್ದೇಶಕರು ಸಹಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಜವಾಬ್ದಾರರೆಂಬ ಅಭಿಪ್ರಾಯ ವ್ಯಕ್ತವಾಯಿತು.
ಸಹಕಾರ ಇಲಾಖೆ ಮೂಲಕ ೬೪ ತನಿಖೆಗೆ ಒಪ್ಪಿಸಬೇಕೆಂದು ಕೆಲವು ಒತ್ತಾಯಿಸಿದರು. ಈ ತನಿಖೆ ವಿಳಂಬವಾಗುವುದರಿಂದ ಲೋಕಾಯುಕ್ತ ತನಿಖೆಗೆ ಒಪ್ಪಿಸುವುದು ಸೂಕ್ತ ಎಂಬ ಅಭಿಪ್ರಾಯ ಹೆಚ್ಚಿನವರಿಂದ ವ್ಯಕ್ತವಾಯಿತು. ಲೋಕಾಯುಕ್ತದಲ್ಲಿ ದೂರು ದಾಖಲಾಗದಿದ್ದಲ್ಲಿ ೬೪ ತನಿಖೆ ಮಾಡಲು ತೀರ್ಮಾನಿಸಲಾಯಿತು.
ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೆಗೆದುಕೊಂಡ ನಿರ್ಣಯದಂತೆ ವಾಣಿಜ್ಯ ಕಟ್ಟಡ ನಿರ್ಮಿಸಲಾಗಿದೆ. ಕೆಲವರ ವಿರೋಧದ ಹಿನ್ನೆಲೆ ಯಲ್ಲಿ ಕಟ್ಟಡ ನಿರ್ಮಾಣ ಸಮಿತಿ ರಚಿಸಿರಿಲಿಲ್ಲ. ಆಡಳಿತ ಮಂಡಳಿಯೇ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿತ್ತೆಂದು ಮಾಜಿ ಅಧ್ಯಕ್ಷ ಕೋಡಿರ ಪ್ರವೀಣ್ ಸಮಜಾಯಿಷಿಕೆ ನೀಡಿದರು.
ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ್ದಂತೆ ಅಧ್ಯಕ್ಷರಾಗಿದ್ದ ಕೋಡಿರ ಪ್ರವೀಣ್, ನಿರ್ದೇಶಕ ಬೊಳಿಯಾಡಿರ ಪ್ರಭು ಮಾತ್ರ ಜವಾಬ್ದಾರಿ ನಿರ್ವಹಿಸಿದ್ದಾರೆ. ಅನುಮತಿ ಪಡೆಯದಿರುವುದು ಹಾಗೂ ಲೆಕ್ಕಚಾರ ಸಮರ್ಪಕವಾಗಿ ಇಲ್ಲದಿರುವುದಕ್ಕೆ ನಿರ್ದೇಶಕರಾಗಿದ್ದ ನಾವು ಹೊಣೆಗಾರರಲ್ಲ ಎಂದು ಖಾದಿರ ಉಮೇಶ್ ಪಳಂಗಪ್ಪ ಹೇಳಿದರು.
ಚರ್ಚೆಯಲ್ಲಿ ಮಲ್ಲಂಡ ಮಧು ದೇವಯ್ಯ, ಕುಂಬೇರ ಮನು ಕುಮಾರ್, ಕುಪ್ಪಂಡ ಗೋಪಾಲ್, ಚೇನಂಡ ದೇವಯ್ಯ, ಮಚ್ಚಾರಂಡ ಪ್ರವೀಣ್, ಅಂಜಪರವಂಡ ಅನಿಲ್, ಮೇದೂರ ಗಣೇಶ್, ಚೇನಂಡ ಸಂಪತ್ ಮತ್ತಿತರರು ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಚೇನಂಡ ಸುರೇಶ್, ನಿರ್ದೇಶಕರಾದ ಖಾದಿರ ಉಮೇಶ್ ಪಳಂಗಪ್ಪ, ಕೊಲ್ಲೀರ ಗೋಪಿ ಚಿಣ್ಣಪ್ಪ, ಮೊಳ್ಳೇರ ರತ್ನ ಪೂಣಚ್ಚ, ಬಾಚಮಾಡ ಸುಬ್ರಮಣಿ, ಕೋಡಿರ ಪ್ರವೀಣ್, ಬೊಳಿಯಾಡಿರ ಪ್ರಭು, ಅಪ್ಪಚೀರ ಕಮಲ, ಮುಕ್ಕಾಟೀರ ದಮಯಂತಿ, ಕಾಟುಮಣಿಯಂಡ ಉಮೇಶ್, ಉದಯ್, ವಿಜಯ, ತೀರ್ಥಕುಮಾರ್, ಕುಡಿಯರ ತಮ್ಮಯ್ಯ, ರಾಮಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಖಾರಿ ಕೋಣಿಯಂಡ ತಿಮ್ಮಯ್ಯ ಇದ್ದರು.
**
ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ್ದಂತೆ ತನಿಖಾ ಸಮಿತಿ ನೀಡಿರುವ ವರದಿ ಬಗ್ಗೆ ವಾರ್ಷಿಕ ಮಹಾಸಭೆಯಲ್ಲಿ ಚರ್ಚಿಸಲಾಗಿದೆ. ಸಭೆ
ಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಕಟ್ಟಡ ನಿರ್ಮಾಣ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು. ಕಂಜಿತಂಡ ಕೆ. ಮಂದಣ್ಣ, ಅಧ್ಯಕ್ಷರು, ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ, ವಿರಾಜಪೇಟೆ.
**
ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ್ದಂತೆ ಆಗಿರುವ ಲೋಪದೋಷ ಕುರಿತು ತನಿಖಾ ಸಮಿತಿ ಆಡಳಿತ ಮಂಡಳಿಗೆ ವರದಿ ಸಲ್ಲಿಸಿದೆ.
ಈ ವರದಿಗೆ ಸಂಬಂಧಿಸಿದ್ದಂತೆ ಮಹಾಸಭೆಯಲ್ಲಿ ಚರ್ಚೆ ನಡೆಯಿತು. ಮುಂದೇನು ಮಾಡಬೇಕೆಂಬ ಬಗ್ಗೆ ಆಡಳಿತ ಮಂಡಳಿಯಲ್ಲಿ ಚರ್ಚಿ ಸಿ ತೀರ್ಮಾನ ತೆಗೆದುಕೊಂಡಿರಲಿಲ್ಲ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ ಲೋಕಾಯುಕ್ತ ತನಖೆಗೆ ಒಪ್ಪಿಸಲು ನಿರ್ಧರಿಸಲಾಗಿದೆ. ಮಲ್ಲಂಡ ಮಧು ದೇವಯ್ಯ, ಸದಸ್ಯರು, ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ, ವಿರಾಜಪೇಟೆ.