ನಿಯಮ ಬಾಹಿರ ವಾಣಿಜ್ಯ ಕಟ್ಟಡ

18mdks1 - Copy
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ವಿರಾಜಪೇಟೆ
ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ ನಿರ್ಮಿಸಿರುವ ವಾಣಿಜ್ಯ ಕಟ್ಟಡ ಕಾಮಗಾರಿ ವಿವಾದಕ್ಕೆ ಸಿಲುಕಿದೆ. ಇಲಾಖೆ ಅನುಮತಿ ಇಲ್ಲದೆ ಕೋಟ್ಯಂತರ ರೂಪಾಯಿ ಹೆಚ್ಚುವರಿ ಹಣ ಖರ್ಚು ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ.

ಕಳೆದ ಮಹಾಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ತನಿಖಾ ಉಪಸಮಿತಿ ವರದಿ ಸಲ್ಲಿಸಿದೆ. ಸೆ.೨೨ ರಂದು ಬೆಳಗ್ಗೆ ೧೦.೩೦ ಗಂಟೆಗೆ ನಡೆಯಲಿರುವ ಮಹಾಸಭೆಯಲ್ಲಿ ಚರ್ಚೆ ನಡೆಯಲಿದೆ. ತನಿಖಾ ಸಮಿತಿ ಸದಸ್ಯರಾಗಿ ಚೇಂದ್ರಿಮಾಡ ಗಣೇಶ್ ನಂಜಪ್ಪ, ಮಾದಂಡ ಎಸ್. ಪೂವಯ್ಯ, ಕಾಂಡಂಡ ಎಸ್. ಚರ್ಮಣ್ಣ ಜವಾಬ್ದಾರಿ ನಿರ್ವಹಿಸಿದ್ದಾರೆ. ಆಡಳಿತ ಮಂಡಳಿಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಸಾಕಷ್ಟು ವಿಚಾರಗಳ ಮೇಲೆ ಬೆಳಕು ಚೆಲ್ಲಲಾಗಿದೆ.

ಮಲಬಾರ್ ರಸ್ತೆಯ ಸ್ವಂತ ನಿವೇಶನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ೧೦-೯-೨೦೧೬ ರ ಮಹಾಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ೨.೬೨ ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ೨೪-೫-೨೦೧೭ ರಂದು ಸಹಕಾರ ಸಂಘಗಳ ನಿಬಂಧಕರು ಅನುಮತಿ ನೀಡಿದ್ದರು. ಅನುಮತಿ ಪಡೆದ ಮೊತ್ತಕ್ಕಿಂತ ೧.೯೭ ಕೋಟಿ ರೂ. ಹೆಚ್ಚು ಖರ್ಚು ಮಾಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಒಟ್ಟು ೪.೬೦ ಕೋಟಿ ರೂ. ವಿನಿಯೋಗಿಸಲಾಗಿದೆ.

ಅನುಮೋದನೆಗೊಂಡ ನಕಾಶೆಯಂತೆ ಕಟ್ಟಡ ನಿರ್ಮಿಸದೆ ಮಾರ್ಪಾಡು ಮಾಡಿದ ಕಟ್ಟಡ ಕಾಮಗಾರಿಗೆ ಅನುಮೋದನೆ ಪಡೆದಿಲ್ಲ. ಮೂಲ ನಕಾಶೆ ಮತ್ತು ಇಲಾಖೆಯಿಂದ ಅನುಮೋದನೆಗೊಂಡ ದರ ಪಟ್ಟಿ ೨೦೧೬ನೇ ಸಾಲಿನ ಸರ್ಕಾರದ ದರ ಪಟ್ಟಿಯಾಗಿದ್ದು, ೨೦೧೮ ರ ಸಾಲಿನ ಸರ್ಕಾರದ ದರ ಪಟ್ಟಿಗೆ ವ್ಯತ್ಯಾಸವಿರುತ್ತದೆ. ಅಂದಾಜು ಪಟ್ಟಿಯೂ ಅವೈಜ್ಞಾನಿಕವಾಗಿ ತಯಾರಿಸಿರುವುದರಿಂದ ನಕಾಶೆಗೆ ಹೋಲಿಕೆ ಮಾಡಿ ದಲ್ಲಿ ಕಾಮಗಾರಿಯ ಒಟ್ಟು ಮೊತ್ತ ಕಡಿಮೆಯಾಗಿರುವುದು ಕಂಡು ಬಂದಿದೆ.

ಕಟ್ಟಡ ಕಾಮಗಾರಿಗೆ ನಿಗದಿ ಪಡಿಸಿದ ದರ ಪಟ್ಟಿಯು ವೃತ್ತದ ದರ ಪಟ್ಟಿಗಿಂತ ಹೆಚ್ಚಾಗಿರುವುದು ಕಂಡು ಬಂದಿದೆ. ಸಹಕಾರ ಇಲಾಖೆಯ ಆದೇಶ ಮತ್ತು ಷರತ್ತಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಕಟ್ಟಡ ಕಾಮಗಾರಿಗೆ ಪ್ರಕಟಿಸಿದ ಟೆಂಡರ್ ರದ್ದು ಪಡಿಸದೇ ಲೇಬರ್ ದರ ಪಟ್ಟಿಗೆ ಟೆಂಡರ್ ಕರೆಯದೇ ಕಾಮಗಾರಿ ನಡೆಸಿರುವುದು ನಿಯಮದ ಉಲ್ಲಂಘನೆಯಾಗಿದೆ.

೩೯ಕ್ಕೂ ಹೆಚ್ಚು ಆಡಳಿತ ಮಂಡಳಿ ಸಭೆಗಳಲ್ಲಿ ಈ ಕಟ್ಟಡ ಕಾಮಗಾರಿ ಬಗ್ಗೆ ಮತ್ತು ಬಿಲ್ ಪಾವತಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಹಕಾರಿ ಕಾಯ್ದೆಯ ನಿಯಮ ೧೪ಎಕೆ- ೭ ರಂತೆ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹೊಣೆಗಾರರಾಗಿದ್ದಾರೆ. ಕಟ್ಟಡ ನಿರ್ಮಾಣ ಅವಧಿಯಲ್ಲಿ ೯ ನಿರ್ದೇಶಕರು ಕಾಮಗಾರಿ ಬಗ್ಗೆ, ಬಿಲ್ ಪಾವತಿ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಆಡಳಿತ ಮಂಡಳಿಯು ಸಹಕಾರಿ ಕಾಯ್ದೆ ಹಾಗೂ ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾಡಿದ ನಿರ್ಣಯ ತೆಗೆದುಕೊಂಡರೆ ಅಂತಹ ನಿರ್ಣ ಯಗಳನ್ನು ಮುಖ್ಯನಿರ್ವಹಣಾಧಿಕಾರಿ ಜಾರಿಗೆ ತರುವಂತಿಲ್ಲ. ಈ ಬಗ್ಗೆ ಸಹಕಾರ ಸಂಘಗಳ ನಿಬಂಧಕರಿಗೆ ವರದಿ ಮಾಡಬೇಕಾಗಿತ್ತು. ಆದರೆ, ಸಿಇಒ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆಂದು ತನಿಖಾ ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

ಹೆಚ್ಚುವರಿ ಹಣ ಸಂದಾಯ
ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ೨,೬೮೫.೯೨ ಚದರ ಮೀಟರ್‌ನಲ್ಲಿ ಕಟ್ಟಡ ಕಟ್ಟಲು ಪರವಾನಗಿ ಶುಲ್ಕ ೪,೧೨,೧೧೫ ರೂ. ಪಾವತಿಸ ಲಾಗಿದೆ. ೪೬೧.೮೬ ಚದರ ಮೀಟರ್ ಕಡಿಮೆ ನಿರ್ಮಾಣ ಮಾಡಿರುವುದರಿಂದ ಹೆಚ್ಚುವರಿಯಾಗಿ ೭೦ ಸಾವಿರ ರೂ. ಪಪಂಗೆ ಪಾವತಿಸಿರು ವುದು ಪತ್ತೆಯಾಗಿದೆ.

ಮೂಲ ನಕಾಶೆಯಂತೆ ೩ನೇ ಅಂತಸ್ತಿನ ಕಾಮಗಾರಿ ಇಲ್ಲ. ೧೦೨.೮೪ ಚದರ ಮೀಟರ್ ಕಟ್ಟಡ ಹಾಗೂ ಟ್ರೆಸ್ ನಿರ್ಮಾಣ ಮಾಡಲಾಗಿದೆ. ಇದಕ್ಕೆ ೨೮ ಲಕ್ಷ ರೂ. ಖರ್ಚಾಗಿದೆ. ಕಟ್ಟಡಕ್ಕೆ ೪.೬೦ ಕೋಟಿ ರೂ. ವೆಚ್ಚ ಮಾಡಿದೆ. ತನಿಖಾ ಉಪಸಮಿತಿ ಸದಸ್ಯರ ಪರಿಶೀಲನಾ ವರದಿ ಯಂತೆ ೩.೩೨ ಕೋಟಿ ರೂ. ಖರ್ಚಾಗಿದೆ. ೧.೨೮ ಕೋಟಿ ರೂ. ಹೆಚ್ಚಿಗೆ ಖರ್ಚಾಗಿರುವುದು ಪತ್ತೆಯಾಗಿದೆ.

ಹಾಲಿ ಕಟ್ಟಡದಲ್ಲಿ ೧.೨೦ ಲಕ್ಷ ರೂ. ತಿಂಗಳ ಬಾಡಿಗೆ ಬರುತ್ತಿದೆ. ಮುಂಗಡ ಹಣವಾಗಿ ೧೨.೯೨ ಲಕ್ಷ ರೂ. ಬಂದಿದೆ. ಸಂಘದ ಕಟ್ಟಡಕ್ಕೆ ಖರ್ಚಾದ ಒಟ್ಟು ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದಲ್ಲಿ ಸಂಘಕ್ಕೆ ಹೆಚ್ಚಿನ ಲಾಭ ಬರುವ ಅವಕಾಶವಿತ್ತೆಂದು ವರದಿಯಲ್ಲಿ ಉಲ್ಲೇಖಿಸ ಲಾಗಿದೆ.

ಠೇವಣಿ ಹಣ ವಿನಿಯೋಗ
ಕಟ್ಟಡ ನಿರ್ಮಾಣಕ್ಕೆ ಕೆಡಿಸಿಸಿ ಬ್ಯಾಂಕ್ ವಿರಾಜಪೇಟೆ ಶಾಖೆಯಲ್ಲಿದ್ದ ೧.೮೦ ಕೋಟಿ, ಮಡಿಕೇರಿ ಶಾಖೆಯಲ್ಲಿದ್ದ ೯.೭೧ ಲಕ್ಷ ಹಾಗೂ ಗೋಣಿಕೊಪ್ಪ ಶಾಖೆಯಲ್ಲಿದ್ದ ೭.೭೯ ಲಕ್ಷ ರೂ. ಠೇವಣಿ ಹಣ ಡ್ರಾ ಮಾಡಲಾಗಿದೆ. ಕಟ್ಟಡಕ್ಕೆ ಖರ್ಚಾದ ಮತ್ತು ಕೈಗೊಂಡಿರುವ ಕಾಮಗಾರಿ ಬಗ್ಗೆ ಕಳೆದ ಮಹಾಸಭೆಯಲ್ಲಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿತ್ತು.

**
ಮಲಬಾರ್ ರಸ್ತೆಯಲ್ಲಿ ನಿರ್ಮಿಸಿರುವ ವಾಣಿಜ್ಯ ಕಟ್ಟಡಕ್ಕೆ ಒಟ್ಟು ೪.೬೦ ಕೋಟಿ ರೂ. ವಿನಿಯೋಗಿಸಲಾಗಿದೆ. ೨.೬೨ ಕೋಟಿ ರೂ. ಮೊತ್ತದ ಕಾಮಗಾರಿಗೆ ಮಾತ್ರ ಅನುಮತಿ ಪಡೆಯಲಾಗಿದೆ. ಕಟ್ಟಡ ನಿರ್ಮಾಣದಲ್ಲಿ ಆಗಿರುವ ಲೋಪದೋಷ ಕುರಿತು ತನಿಖಾ ಉಪಸಮಿತಿ ವರದಿ ಸಲ್ಲಿಸಿದೆ. ಸೆ.೨೨ ರಂದು ಆಯೋಜಿಸಿರುವ ವಾರ್ಷಿಕ ಮಹಾಸಭೆಯಲ್ಲಿ ವರದಿ ಬಗ್ಗೆ ಚರ್ಚೆ ನಡೆಯಲಿದೆ. ಕಂಜಿತಂಡ ಕೆ. ಮಂದಣ್ಣ, ಅಧ್ಯಕ್ಷರು, ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ ನಿಯಮಿತ, ವಿರಾಜಪೇಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net