ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಿಂದೆದ್ದ ವಿದ್ಯಾರ್ಥಿಗಳು

16 vpt. 2.1
Published on

ವಿರಾಜಪೇಟೆ : ವಿರಾಜಪೇಟೆ ಸಮೀಪದ ಅರಮೇರಿಯ ಎಸ್‌ಎಂಎಸ್ ವಿದ್ಯಾಪೀಠದಲ್ಲಿ ಇತ್ತಿಚೆಗೆ ಮಕ್ಕಳ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು.
ಕೊಡಗಿನಲ್ಲಿ ಮುಂಗಾರು ಅಲ್ಪ ವಿರಾಮ ಕೊಟ್ಟರು ಕೃಷಿ ಚಟುವಟಿಕೆಗಳು ಬಿರುಸಿನಿಂದಲೇ ನಡೆಯುತ್ತಿದೆ. ಇದರ ನಡುವೆ ಕಳಂಚೇರಿ ಮಠದ ಗದ್ದೆಯಲ್ಲಿ ವಾಡಿಕೆಯಂತೆ ಈ ಬಾರಿಯೂ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಪ್ರಗತಿಪರ ರೈತ ಉದಿಯಂಡ ಚಂಗಪ್ಪ ಕ್ರೀಡಾಜ್ಯೋತಿ ಬೆಳಗುವ ಮೂಲಕ ಕೂಟಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ’
ಕೃಷಿ ಭೂಮಿಯೊಡನೆ ತಮಗಿರುವ ಸಂಬಂಧ, ಕೃಷಿಯಿಂದ ರೈತ ಎದುರಿಸುವ ಸವಾಲುಗಳನ್ನು ವಿವರಿಸಿದರು. ಅನ್ನದ ಒಂದೊಂದು ಅಗುಳೂ ಬಹಳ ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳಿಗೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ
ಬಹುಮುಖೀ ಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು ಎಂದರು.
ಮಣ್ಣಿನೊಂದಿಗೆ ಬದುಕೋಣ: ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಕೆಸರುಗದ್ದೆ ಕ್ರೀಡಾಕೂಟ ಮನಸ್ಸಿನ ಮನರಂಜನೆಗಾಗಿ ಮಾತ್ರವಲ್ಲ, ಮಣ್ಣಿನೊಂದಿಗೆ ಹೇಗೆ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದನ್ನು ಮಕ್ಕಳಿಗೆ ಕಲಿಸುತ್ತದೆ ಎಂದರು.
ಮಣ್ಣಿನ ಮೇಲೆ ಪ್ರೀತಿಯನ್ನು ಎಳವೆಯಿಂದಲೇ ಬೆಳೆಸಿಕೊಂಡರೆ ಬದುಕಿಗೊಂದು ಮೌಲ್ಯ ಬರುತ್ತದೆ. ಕೆಸರುಗದ್ದೆಯ ಮಣ್ಣಿನ ಸುಗಂಧದ ಸೊಗಡು ಬೇರೆ ಯಾವುದರಿಂದಲೂ ನಮಗೆ ಸಿಗಲು ಸಾಧ್ಯವಿಲ್ಲ. ಯಾವುದೇ ವೃತ್ತಿ ಮಾಡಿದರೂ ಪ್ರತಿಯೊಬ್ಬರಿಗೆ ಮಣ್ಣಿನ ಮೇಲೆ
ಗೌರವವಿರಬೇಕು ಎಂದು ಸ್ವಾಮೀಜಿ ನುಡಿದರು.
300 ವರ್ಷದ ಇತಿಹಾಸ: ವಿದ್ಯಾಪೀಠದ ಪ್ರಾಂಶುಪಾಲರಾದ ಕುಸುಮ್ ಮಾತನಾಡಿ ಸಾಂಪ್ರದಾಯಿಕ ಕೃಷಿ ಪದ್ಧತಿ ನಶಿಸಬಾರದು. 300 ವರ್ಷ ಇತಿಹಾಸ ಇರುವ ಮಠ ಕಳೆದ 16 ವರ್ಷದಿಂದ ಮಕ್ಕಳಿಗಾಗಿ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸುತ್ತಿದೆ ಎಂದರು. ವಿದ್ಯಾರ್ಥಿಗಳಿಗಾಗಿ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಮತ್ತು ಓಟ ಏರ್ಪಡಿಸಲಾಗಿತ್ತು. ಕೆಸರುಗದ್ದೆಯಲ್ಲಿ ಮಿಂದೆದ್ದ ಚಿಣ್ಣರು ಸಂಭ್ರಮಿಸಿದ್ದು ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net