

ವಿರಾಜಪೇಟೆ : ಪಟ್ಟಣದ ಸಂತ ಅನ್ನಮ್ಮ ಕಾಲೇಜಿನಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಸ್ನಾತಕೋತ್ತರ ವಿಭಾಗ, ಎನ್. ಎಸ್. ಎಸ್ ಘಟಕ, ಯುವ ರೆಡ್ ಕ್ರಾಸ್ ಘಟಕ ಹಾಗೂ ಸಂತ ಅನ್ನಮ್ಮ ಪಿ. ಯು. ಕಾಲೇಜಿನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು. ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕ ಹಾಗೂ ಪಿ. ಯು ಕಾಲೇಜು ಪ್ರಾಂಶುಪಾಲ ಮದಲೈ ಮುತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಜನತೆಯು ಮೊಬೈಲ್ ಗೀಳಿಗೆ ಬೀಳದೆ ಯೋಗವನ್ನು ತಮ್ಮ ಜೀವನದ ಒಂದು ಭಾಗ ಎಂಬುದಾಗಿ ಅಳವಡಿಸಿಕೊಳ್ಳಿ ಎಂದು ಕಿವಿಮಾತನ್ನು ಹೇಳಿದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ ಯೋಗಾಭ್ಯಾಸವು ಸುಂದರ ಬದುಕಿಗೆ ಅತ್ಯಗತ್ಯವಾಗಿದೆ. ಅದರಲ್ಲಿಯೂ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ತೊಡಗಬೇಕು. ನಕಾರಾತ್ಮಕ ಚಿಂತನೆಗಳನ್ನು ತೊಡೆದು ಹಾಕಿ ಜೀವನದಲ್ಲಿ ಸಕಾರಾತ್ಮಕ ಚಿಂತನೆ ಮೂಡುವಂತೆ ಮಾಡಲು ಯೋಗದ ಪಾತ್ರ ಬಹಳಷ್ಟಿದೆ ಎಂದು ಹೇಳಿದರು.