

ವಿರಾಜಪೇಟೆ : ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣ ಖಂಡಿಸಿ ಹಿಂದು ಮಲಯಾಳಿ ಸಂಘಟನೆಯಿಂದ ಮೇಣದಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಯಿತು.ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ, ಹಿಂದು ಮಲಯಾಳಿ ಅಸೋಶಿಯೇಷನ್, ಮಹಿಳಾ ಘಟಕಗಳು ವಿರಾಜಪೇಟೆ ಮತ್ತು ಎಸ್‌ಎನ್‌ಡಿಪಿ ವಿರಾಜಪೇಟೆ ಶಾಖೆ ಪ್ರಮುಖರು ನಗರದ ಗಡಿಯಾರ ಕಂಬದ ಬಳಿ ಸಮಾವೇಶಗೊಂಡು ಕಾಶ್ಮೀರದ ನರಮೇಧವನ್ನು ಖಂಡಿಸಿದರು. ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಮುಖಂಡ ಪಿ.ಜಿ. ಸುಮೇಶ್, ಉಗ್ರರ ದಾಳಿಯನನು ಸಮುದಾಯದ ಸಂಘಟನೆಗಳು ಬಲವಾಗಿ ಖಂಡಿಸುತ್ತವೆ ಎಂದರು. ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿರುವುದನ್ನು ಸಹಿಸಲಾರದ ಪಾಕಿಸ್ತಾನವು ಪ್ರತೀಕಾರದ ರೂಪದಲ್ಲಿ ಉಗ್ರರಿಂದ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಲು ಕುಮ್ಮಕ್ಕುನೀಡಿದೆ. ಪುಲ್ವಾಮಾ ದಾಳಿ ನಂತರದಲ್ಲಿ ಇದು ಭೀಕರ ಹತ್ಯಾಕಾಂಡವಾಗಿದೆ. ಈ ಪ್ರಕರಣ ದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ. ಉಗ್ರರ ದಮನಕ್ಕಾಗಿ ಕುಮ್ಮಕ್ಕು ನೀಡುವ ಶಕ್ತಿಯಾಗಿರುವ ಪಾಕ್ ವಿರುದ್ಧ ಕ್ರಮ ಅಗತ್ಯ ಎಂದರು. ಉಗ್ರರ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಮತ್ತು ರಕ್ಷಣಾ ಪಡೆಗಳಿಗೆ ನಾವು ಸಂಪೂರ್ಣ ಬೆಂಬಲ ಸೂಚಿಸುತ್ತೇವೆ ಎಂದು ಅವರು ಘೋಷಿಸಿದರು. ಹಿಂದು ಮಲಯಾಳಿ ಅಸೋಶಿಯೇಷನ್ ವಿರಾಜಪೇಟೆ ಅಧ್ಯಕ್ಷ ವಿನೂಪ ಕುಮಾರ್ ಮಾತನಾಡಿ, ಪಾಕ್ ಪ್ರಚೋದಿತ ಉಗ್ರರು ಅಮಾಯಕ ಪ್ರವಾಸಿಗರ ಮೇಲೆ ನಡೆಸಿರುವ ಕೃತ್ಯ ರಾಕ್ಷಸೀ ಪ್ರವೃತ್ತಿಯಾಗಿದೆ ಎಂದರು. ಪ್ರವಾಸಿಗರು ಹಿಂದು ಎನ್ನುವ ಕಾರಣಕ್ಕೆ ಭೀಕರವಾಗಿ ಹತ್ಯೆ ಮಾಡಲಾಗಿದೆ. ರಾಜ್ಯದ ರಾಜಕೀಯ ಮುಖಂಡರು ನಾವೆಲ್ಲಾ ಭಾರತೀಯರು ಎನ್ನುವ ಮನೋಭಾವದಿಂದ ಹೇಳಿಕೆ ನೀಡಬೇಕು. ಕೇಂದ್ರ ಸರ್ಕಾರದೊಂದಿಗೆ ಬೆಂಬಲವಾಗಿ ನಿಲ್ಲಬೇಕು. ರಾಜ್ಯದಲ್ಲೂ ಹಿಂದುಗಳ ಮೇಲಿನ ದೌರ್ಜನ್ಯಗಳಿಗೆ ಮಟ್ಟ ಹಾಕಬೇಕು ಎಂದರು. ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷೆ ಶೀಬಾ ಪೃಥ್ವಿನಾಥ ಮಾತನಾಡಿದರು. ಪ್ರತಿಭಟನೆಯಲ್ಲಿ ಮುಖಂಡರಾದಟಿ.ಎನ್. ನಾರಾಯಣ, ಸಮುದಾಯದ ಸದಸ್ಯರು ಹಾಜರಿದ್ದರು.