

ವಿರಾಜಪೇಟೆ : ವಿರಾಜಪೇಟೆ ನಗರದ ಆಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಜನರ ಬಹು ದಿನಗಳ ಬೇಡಿಕೆಗೆಮನ್ನಣೆ ನೀಡಲಾಗುವುದು ಎಂದು ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು. ನಗರದ ಹೊರವಲಯದ ವಿಜಯ ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿರಾಜಪೇಟೆ ನಗರದ ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಜನರು ಬೇಡಿಕೆ ಇಟ್ಟಿದ್ದರು. ಅದಕ್ಕಾಗಿ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ. ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ವಿವಿಧ ಕಾಮಗಾರಿ ಆರಂಭವಾಗಿದೆ ಎಂದು ಅವರು ನುಡಿದರು. ವಿಜಯನಗರ ಬಡಾವಣೆಯಲ್ಲಿ ರಸ್ತೆ ಕಾಮಗಾರಿ (ಕೆಎಸ್ ಆರ್‌ಟಿಸಿ ಮುಂಭಾಗದ ನಿವೇಶನಗಳಿಗೆ ತೆರಳಲು), ನಿಸರ್ಗ ಬಡಾವಣೆ ಮತ್ತು ಗೌರಿಕೆರೆ ಹಿಂಭಾಗದ ಮನೆಗಳಿಗೆ ತೆರಳಲು ಸುಸಜ್ಜಿತ ಕಾಂಕ್ರಿಟ್ ರಸ್ತೆ,ಪುರಸಭೆಯ ಕಟ್ಟಡಕ್ಕೆ ಕಾಯಕಲ್ಪ, ನಗರ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿ ಆರಂಭವಾಗಿದೆ.ಹಂತ ಹಂತವಾಗಿ ಸುಂದರವಾದ ನಗರ ನಿರ್ಮಾಣ ಮಾಡುವ ಕಾರ್ಯದಲ್ಲಿ ಸರ್ವರೂ ಕೈಜೋಡಿಸಬೇಖು ಎಂದು ಅವರು ಮನವಿ ಮಾಡಿದರು. ನಗರ ಶುಚಿತ್ವಕ್ಕೆ ಆದ್ಯತೆ ನೀಡೋಣ ಎಂದರು. ವಿಜಯನಗರ ಬಡಾವಣೆಯ ನಿವಾಸಿಗಳಿಗೆ ಒಣ ಕಸ ಮತ್ತು ಹಸಿ ಕಸಗಳನ್ನು ವಿಂಗಡನೆಗೊಳಿಸಲು ಉಪಯುಕ್ತವಾಗ ಪ್ಲಾಸ್ಟಿಕ್ ಬುಟ್ಟಿಗಳನ್ನು ನೀಡಲಾಯಿತು.
ಪುರಸಭೆಯ ಮುಖ್ಯಾಧಿಕಾರಿ ಚಂದ್ರ ಕುಮಾರ್, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷರಾದ ಫಾಸಿಯ ತಬ್ಸುಂ, ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಸಿ.ಕೆ. ಪ್ರಥ್ವಿನಾಥ, ಡಿ.ಪಿ. ರಾಜೇಶ ಪದ್ಮನಾಭ, ಮೊಹಮ್ಮದ್ ರಫಿ, ರಜನಿಕಾಂತ, ಅನಿತಾ ಕುಮಾರ, ಕೆಡಿಪಿ ಸದಸ್ಯ ಮಾರ್ವಿನ್ ಲೋಬೊ ಹಾಜರಿದ್ದರು.