ಸುಗಮ ಸಂಗೀತ ಸಂತಸ ನೀಡುವ ಕಲಾ ಪ್ರಕಾರ

7 vpt 1.1
Published on

ಗಜಲ್ ಕವಿ ಡಾ. ಶ್ರೀಶೈಲ ಮಾದಣ್ಣವರ ಅಭಿಮತ

ವಿರಾಜಪೇಟೆ: ಸುಗಮ ಸಂಗೀತ ವಿಶ್ವವ್ಯಾಪಿಯಾಗಿ ಸಂತೋಷ ನೀಡುವ ಕಲಾ ಪ್ರಕಾರವಾಗಿದೆ ಎಂದು ನಿವೃತ್ತ ವೈಧ್ಯಾಧಿಕಾರಿ ಮತ್ತು ಖ್ಯಾತ ಗಜಲ್ ಕವಿ ಡಾ. ಶ್ರೀಶೈಲ ಮಾದಣ್ಣವರ ಹೇಳಿದರು.
ಪ್ರಣವ ಸಂಗೀತ ಶಾಲೆ ಪ್ರಥಮ ವಾರ್ಷಿಕ ಸಂಭ್ರಮಾಚರಣೆ ನಿಮಿತ್ತ ವಿರಾಜಪೇಟೆ ಶ್ರೀ ರಾಜರಾಜೇಶ್ವರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು. ನಮ್ಮ ನೆಲದ ದಿವ್ಯ ಪರಂಪರೆ ಮತ್ತು ಸಂಸ್ಕೃತಿಗಳ ಪ್ರತೀಕವಾದ ಕರ್ನಾಟಕ ಸಂಗೀತ, ಜಾನಪದ, ಸುಗಮ ಸಂಗೀತಗಳನ್ನು ಅಭ್ಯಾಸ ಮಾಡುವತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು. ಭಾರತೀಯ ಮೂಲದ ಸಂಗೀತ ಕಲೆಯು ಎಳೆಯರು, ಯುವಜನರು ಮತ್ತು ವೃದ್ಧರನ್ನು ರಂಜಿಸುವ, ಮುದ ನೀಡುವ ವಿಶೇಷತೆ ಹೊಂದಿದೆ. ಗಾಯನದ ಮೂಲಕ ಸಾಹಿತ್ಯ ಉಣಿಸಿ ಮೋಡಿ ಮಾಡುವ ಶಕ್ತಿ ಹೊಂದಿದೆ. ಈ ನಿಟ್ಟಿನಲ್ಲಿ ಮುಂದಿನ ತಲೆಮಾರಿಗೂ ಈ ಕಲೆಗಳನ್ನು ಮುಂದುವರಿಸುವ ಹೊಣೆ ಹಿರಿಯರ ಮೇಲಿದೆ ಎಂದರು.
ಪ್ರಣವ ಸಂಗೀತ ಶಾಲೆಯ ಮುಖ್ಯ ಶಿಕ್ಷಕಿ ಡಾ. ಕಾವ್ಯಾ ಕಾಮತ್ ಮಾತನಾಡಿ, 7 ವರ್ಷದ ಹಿಂದೆ ವಿರಾಜಪೇಟೆಯ ಗಾಯತ್ರಿ ಭವನದಲ್ಲಿ ಆರಂಭವಾದ ಶಾಲೆ ಈಗ ರಾಜಧಾನಿ ಬೆಂಗಳೂರಿಗೂ ಸೇವೆ ವಿಸ್ತರಿಸಿದೆ. ಸುಗಮ ಸಂಗೀತ, ಕರ್ನಾಟಕ ಸಂಗೀತವನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಮಕ್ಕಳಿಗೆ, ಯುವ ಜನರಿಗೆ ಗಾಯನ ಕಲಿಸುವ ಸೇವೆ ಮಾಡುತ್ತಿದೆ ಎಂದರು.
ಶ್ರದ್ಧೆಯಿಂದ ಅಭ್ಯಾಸ ಮಾಡಿ: ಸುಗಮ ಸಂಗೀತ ಗಾಯಕ ಕೆ.ಎಸ್. ಶ್ರೀಧರ ಅಯ್ಯರ್ ಮಾತನಾಡಿ, ಸುಗಮ ಸಂಗೀತ ರಂಗಕ್ಕೆ ಹೊಸ ಆಯಾಮ ಬರೆದವರು ಸಿ.ಅಶ್ವಥ್. ಅವರ ಗಾಯನ ಲಹರಿ ಮತ್ತು ಪದಗಳ ಉಚ್ಚಾರಣಾ ಶೈಲಿ ಅನನ್ಯ ಎಂದು ಸ್ಮರಿಸಿದರು. ದಾಸರ ಪದ, ಕೀರ್ತನೆ, ಜಾನಪದ ಸಂಗೀತವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂಗೀತ ನಿರ್ದೇಶಕ, ಗಾಯಕ ಮೃತ್ಯುಂಜಯ ದೊಡ್ಡವಾಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಗಮ ಸಂಗೀತ ಕಲಿಕೆಯತ್ತ ಮಕ್ಕಳ ಆಸಕ್ತಿ ಹೆಚ್ಚಬೇಕು. ಭಾರತೀಯ ಸಂಸ್ಕೃತಿ, ಕಲೆ, ಸಾಹಿತ್ಯ ಪರಂಪರೆಯನ್ನು ಪ್ರೀತಿಸಬೇಕು ಎಂದರು. ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಚಿತ್ರಕಲಾ ಶಿಕ್ಷಕ ಕ್ಲಿಫರ್ಡ್ ಡಿಮೆಲ್ಲೊ ಅವರ ಕುಂಚ -ಗಾಯನ ಗಮನ ಸೆಳೆಯಿತು. ಬಾಲ ಪ್ರತಿಭೆಗಳು, ಪಾಲಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net