

ಮುತ್ತಪ್ಪ ಮಲಯಾಳಿ ಸಮಾಜದ ಕಾಳಜಿ- ಅಧ್ಯಕ್ಷ ಪಿ.ಜಿ. ಸುಮೇಶ್ ವಿವರ
ವಿರಾಜಪೇಟೆ : ನಗರೀಕರಣ ಹೆಚ್ಚಾದಂತೆ ಮೃತರ ಅಂತ್ಯಕ್ರಿಯೆಗೆ ಕಟ್ಟಿಗೆ ದೊರಕುವುದು ಕಷ್ಟಕರವಾಗಿರುವ ಸಂದರ್ಭದಲ್ಲಿ ಗ್ಯಾಸ್ ಬರ್ನರ್ ಸಾಧನ ಖರೀದಿಗೆ ನಿರ್ಧರಿಸಲಾಗಿದೆ ಎಂದು ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ಹೇಳಿದರು.ಸಂಸ್ಥೆ ಈಗಾಗಲೇ ಹಲವು ಜನೋಪಯೋಗಿ ಸೇವೆಗಳನ್ನು ಮಾಡಿದೆ. ಮುಂಬರುವ ದಿನಗಳಲ್ಲಿ ಕಟ್ಟಿಗೆ ಅಭಾವ, ಸಮಯ, ಶ್ರಮ ಮತ್ತು ಅಂತ್ಯಕ್ರಿಯೆಗೆ ಎದುರಾಗುವ ಸಂಕಷ್ಟಗಳನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೆರೆಯ ಕೇರಳ ಮತ್ತು ಇತರ ರಾಜ್ಯಗಳಲ್ಲಿ ಶವ ಸುಡುವ ಗ್ಯಾಸ್ ಬರ್ನರ್ ಸಾಧನ ಬಳಕೆಯಲ್ಲಿದೆ. ಹಾಗಾಗಿ ಸಂಸ್ಥೆಯ 16 ನೇ ವಾರ್ಷಿಕ ಸಭೆಯಲ್ಲಿ ಮಾಡಿದ ತೀರ್ಮಾನದಂತೆ ಮೃತದೇಹ ಸಂರಕ್ಷಣಾ ಶೀಥಲ ಯಂತ್ರ (ಫ್ರೀಜರ್ )ವನ್ನು ಕಳೆದ 4 ತಿಂಗಳ ಹಿಂದೆ ಖರೀದಿಸಿ ಸಮುದಾಯದವರಿಗೆ ಮತ್ತು ಇತರರಿಗೆ ಬಾಡಿಗೆ ರೂಪದಲ್ಲಿ ನೀಡುವ ಸೇವೆ ಮಾಡಿದ್ದೇವೆ. ಇದರಿಂದ ಸಂಗ್ರಹವಾದ ಶುಲ್ಕ ಮತ್ತು ದಾನಿಗಳಿಂದ ದೊರೆತ ನಿಧಿಯಿಂದ ಗ್ಯಾಸ್ ಬರ್ನರ್ ಖರೀದಿಗೆ ಮುಂದಾಗಿದ್ದೇವೆ ಎಂದು ವಿವರಿಸಿದರು.ಮೃತದೇಹ ಸುಡಲು ಕಡಿಮೆ ವೆಚ್ಚ ಮತ್ತು ಸಮಯದ ಉಳಿತಾಯ ಇಲ್ಲಿ ಪ್ರಮುಖವಾಗಲಿದೆ ಎಂದು ಅವರು ವಿವರಿಸಿದರು.
ಸಮಾಜದ ಪ್ರಧಾನ ಕಾರ್ಯದರ್ಶಿ ಸಿ,ಆರ್. ಬಾಬು ಮಾತನಾಡಿ 70,216 ರೂ ವೆಚ್ಚದಲ್ಲಿ ಫ್ರೀಜರ್ ಖರೀದಿ ಮಾಡಿದ್ದೆವು. ಇದೀಗ ಹೊಸ ರೂಪದ ಸೇವೆಗೆ ಸಾಕಷ್ಟು ದಾನಿಗಳು ಮುಂಗಡವಾಗಿ ದೇಣಿಗೆ ನೀಡಿದ್ದಾರೆ. ಸದ್ಯದಲ್ಲೇ ಸಾಧನ ಖರೀದಿಗೆ ಮುಂದಾಗಲಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಪದಾಧಿಕಾರಿಗಳಾದ ಟಿ.ಕೆ.ಪದ್ಮನಾಭ, ಸಜೀವನ್, ಸುರೇಶ ಇತರರು ಇದ್ದರು.