

ವಿರಾಜಪೇಟೆ : ವಿರಾಜಪೇಟೆಯ ಶಾಸಕರ ಕಛೇರಿ ಸಭಾಂಗಣದಲ್ಲಿ ಇತ್ತಿಚೆಗೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್, ಅರ್ಹ ಫಲಾನುಭವಿಗಳು ಯಾವುದೇ ಕಾರಣಕ್ಕೂ ಯೋಜನೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಯೋಜನೆಗಳ ಅನುಷ್ಠಾನವನ್ನು 100% ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಫಲಾನುಭವಿಗಳ ಅಹವಾಲು ಸ್ವೀಕರಿಸಲು ಸಂವಾದ ನಡೆಸಲಾಗುವುದು. ಶಕ್ತಿ, ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳ ಅನುಷ್ಠಾನದ ಬಗ್ಗೆಯೂ ಚರ್ಚಿಸಲಾಯಿತು.ಅರ್ಹ ಫಲಾನುಭವಿ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗದಿರಲಿ. ಪಂಚ ಗ್ಯಾರಂಟಿಗಳು ಕರ್ನಾಟಕ ಸರ್ಕಾರದ ಅತ್ಯಂತ ಮಹತ್ವದ ಯೋಜನೆಗಳಾಗಿದ್ದು, ಅರ್ಹತೆ ಹೊಂದಿರುವ ಯಾವುದೇ ಫಲಾನುಭವಿಗಳು ತಂತ್ರಾಂಶದ ನೋಂದಣಿ ಸೇರಿದಂತೆ ಯಾವುದೇ ಕಾರಣದಿಂದ ವಂಚಿತರಾಗದಂತೆ ಅನುಷ್ಠಾನ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಗ್ಯಾರಂಟಿ ಯೋಜನೆಗಳು ನಾಗರಿಕರ ಜೀವನದ ಗುಣಮಟ್ಟ ಸುಧಾರಣೆಗೆ ಪೂರಕವಾಗಿದ್ದು ನಮ್ಮ ಭಾಗದಲ್ಲಿ ಶೇ.100 ರ ಅನುಷ್ಠಾನಕ್ಕೆ ಮುಂದಾಗುವಂತೆ ಸೂಚಿಸಿದರು. ಪಂಚಾಯಿತಿ ಹಂತದಲ್ಲಿ ಫಲಾನುಭವಿಗಳೊಂದಿಗೆ ಸಂವಾದ ಜರುಗಿಸಿ, ಅಹವಾಲು ಸ್ವೀಕರಿಸುವುದರೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಯೋಜಿಸಿರುವುದಾಗಿ ಈ ಸಂಧರ್ಭ ತಿಳಿಸಿದರು.
ಸಮಿತಿ ಸದಸ್ಯರುಗಳು ಮಾತನಾಡಿ ತಾಲೂಕಿನ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಪೈಕಿ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಅನುಷ್ಠಾನದಲ್ಲಿ ಸಾಕಷ್ಟು ಸುಧಾರಣೆಯಾಗಬೇಕಾಗಿದ್ದು, ಗ್ರಾಮೀಣ ಪ್ರದೇಶದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸದ ಹೊರತು ಗ್ರಾಮೀಣ ಮಹಿಳೆಯರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೂ ಈ ಯೋಜನೆಯ ಅನುಕೂಲ ದೊರಕುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.