

ಗುತ್ತಲ: ಪಟ್ಟಣದ ವೀರಭದ್ರೇಶ್ವರ ಅಗ್ನಿಕುಂಡ ಜಾತ್ರಾ ಮಹೋತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು.
ಪ್ರತಿವರ್ಷದಂತೆ ಶ್ರಾವಣ ಮಾಸದ ಕೊನೆಯ ಮಂಗಳವಾರ ಜಾತ್ರೆಯ ಅಂಗವಾಗಿ ಬೆಳಗ್ಗೆ ಪುರವಂತರು ಶಿವ, ವಿಷ್ಣು, ವೀರಭದ್ರೇಶ್ವರ, ದಕ್ಷಬ್ರಹ್ಮನ ಸಂಹಾರ ಸೇರಿದಂತೆ ವಿವಿಧ ದೃಷ್ಟಾಂತಗಳ್ನು ಒಡಪುಗಳ ಮೂಲಕ ಹೇಳುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಪಟ್ಟಣದ ಶ್ರೀ ಹೇಮಗಿರಿ ಚನ್ನಬಸವೇಶ್ವರರ ಮಠಕ್ಕೆ ಗುಗ್ಗಳದ ಮೆರವಣಿಗೆ ಆಗಮಿಸಿದಾಗ ಪುರವಂತರಾದ ಬಸವರಾಜ ಗಂಗಣ್ಣನವರ ನೂರಾರು ಮೀಟರ್ ಉದ್ದದ ದಾರವನ್ನು ನಾಲಗೆಯಲ್ಲಿ ಎಳೆಯುತ್ತ ಸಮಾಳದ ಶಬ್ಧಕ್ಕೆ ತಕ್ಕಂತೆ ನಾಟ್ಯ ಮಾಡುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು. ಇದೇ ವೇಳೆ ಅನೇಕರು ತಮ್ಮ ಹರಕೆ ತೀರಿಸಲು ಬಾಯಿ, ಕೈಗಳಿಗೆ ಶಸ್ತ್ರಗಳನ್ನು ಚುಚ್ಚಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಸ್ ನಿಲ್ದಾಣದ ಸರ್ಕಲ್ ಬಳಿ ಶಿವಪ್ಪ ಇಚ್ಚಂಗಿ ಎಂಬ ಭಕ್ತ ತಾಮ್ರದ ಸೂಜಿ ಮೂಲಕ ಪೋಣಿಸಲಾದ ನೂರಾರು ಮೀಟರ್ ಉದ್ದನೆಯ ದಾರವನ್ನು ತನ್ನ ನಾಲಗೆಯಲ್ಲಿ ಚುಚ್ಚಿಕೊಂಡು ಹೊರತೆಗೆದು ಭಕ್ತಿ ಮೆರೆದರು.
ಪಟ್ಟಣ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸಂಜೆ 5 ಗಂಟೆಗೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ನಂತರ ಸಂಪ್ರದಾಯದ ಪೂಜಾ ವಿಧಿ-ವಿಧಾನಗಳ ಮುಗಿದ ನಂತರ ದೊಡ್ಡದಾದ ಅಗ್ನಿಕುಂಡದಲ್ಲಿ ಪುರವಂತರು ಹಾಗೂ ನೂರಾರು ಭಕ್ತರ ಪ್ರವೇಶ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಈ ವೇಳೆ ಎಲ್ಲಡೆ ಹರ ಹರ ಮಹದೇವ ಜೈ ಘೋಷ ಕೇಳುತ್ತಿತ್ತು. ಸಾವಿರಾರು ಭಕ್ತರು ಶ್ರೀ ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದರು. ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು.