

ಮಡಿಕೇರಿ: ಕೊಡಗು ಜಿಲ್ಲೆಯ ಬ್ರಾಹ್ಮಣ ಸಮುದಾಯದವರಿಗೆ ಮೊದಲ ಬಾರಿಗೆ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ಆಯೋಜಿಸಲಾಗಿದ್ದ ವಿಪ್ರ ಕ್ರೀಡೋತ್ಸವದ ಸಲುವಾಗಿ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರಡ ಗ್ರಾಮ ಕ್ರಿಕೆಟರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಗುಡ್ಡೆಹಿತ್ಲು ಕ್ರಿಕೆಟರ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ-ಗೋಣಿಕೊಪ್ಪ, ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಕುಶಾಲನಗರ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವೀರಾಜಪೇಟೆ ಘಟಕ ಹಾಗೂ ಬ್ರಾಹ್ಮಣ ಸಮಾಜ ಸೋಮವಾರಪೇಟೆ ಸಹಯೋಗದೊಂದಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.
೬ ಓವರ್‌ಗಳಿಗೆ ಸೀಮಿತವಾಗಿದ್ದ ನಾಕ್‌ಔಟ್ ಮಾದರಿಯ ಕ್ರಿಕೆಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಡ್ಡೆಹಿತ್ಲು ತಂಡ ನಿಗದಿತ ೬ ಓವರ್‌ಗಳಲ್ಲಿ ೨ ವಿಕೆಟ್‌ಗಳ ನಷ್ಟಕ್ಕೆ ಭರ್ಜರಿ ೮೧ ರನ್‌ಗಳಿಸಿತು. ತಂಡದ ಪರ ಕಾರ್ತಿಕ್ ೫೯ ರನ್ ಗಳಿಸಿದರು. ಒಂದೇ ಓವರ್ನಲ್ಲಿ ೬ ಸಿಕ್ಸರ್‌ಗಳನ್ನು ಭಾರಿಸುವ ಮೂಲಕ ಕಾರ್ತಿಕ್ ಗಮನ ಸೆಳೆದರು. ಗುರಿ ಬೆನ್ನಟ್ಟಿದ ಕರಡ ತಂಡ ೫.೫ ಓವರ್ಗಳಲ್ಲಿ ೪ ವಿಕೆಟ್‌ಗಳ ನಷ್ಟಕ್ಕೆ ಗುರಿ ಸಾಧಿಸಿತು. ಕರಡ ತಂಡದ ಪರ ಪ್ರಕಾಶ್‌ರವರು ಒಟ್ಟು ೬ ಸಿಕ್ಸರ್‌ಗಳೊಂದಿಗೆ ಒಟ್ಟು ೩೯ ರನ್ ಹಾಗೂ ಹರಿ ಅವರು ೨೩ ರನ್‌ಗಳಿಸಿ ಗುರಿ ತಲುಪಿಸಲು ಸಹಕಾರಿಯಾದರು.
ಸೆಮಿ ಫೈನಲ್ ಪಂದ್ಯಾವಳಿಯಲ್ಲಿ ಗುಡ್ಡೆಹಿತ್ಲು ತಂಡ ಚೆಯ್ಯಂಡಾಣೆ ಚ್ಯಾಲೆಂಜರ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದರೆ, ಕರಡ ತಂಡ ಮಡಿಕೇರಿ ವಿಪ್ರಾಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶ ಪಡೆಯಿತು. ಉಳಿದಂತೆ ಓಂಕಾರ್ ಕ್ರಿಕೆಟರ್ಸ್ ಪೊನ್ನಂಪೇಟೆ, ಅರ್ಚಕರ ಸಂಘ, ಬ್ರಾಹ್ಮಣ ಕ್ಷೇಮಾಭಿವೃದ್ದಿ ಸಂಘ-ಕುಶಾಲನಗರ, ಫ್ರೆಂಡ್ಲಿ ಬಾಯ್ಸ್ ಕಡಂಗ, ಬ್ರಾಹ್ಮಣ ಸಮಾಜ-ಸೋಮವಾರಪೇಟೆ, ಬೆನಕ ಮಡಿಕೇರಿ, ಕೊಡಗು ಜಿಲ್ಲಾ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ - ಗೋಣಿಕೊಪ್ಪ ಸೇರಿದಂತೆ ಒಟ್ಟು ೧೧ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.
ಅಂತಿಮ ಪಂದ್ಯದ ವಿಜೇತ ಹಾಗೂ ಪರಾಜಿತ ತಂಡಗಳಿಗೆ ಟ್ರೋಫಿ ಹಾಗೂ ವೈಯಕ್ತಿಕ ಸಾಧನೆಗಳ ಟ್ರೋಫಿಗಳನ್ನು ಡಿ.೧೮ ರಂದು ಮಡಿಕೇರಿ ಲಕ್ಷ್ಮಿನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ವಿತರಣೆ ಮಾಡಲಾಗುವುದು. ಕ್ರೀಡೋತ್ಸವದ ಅಂಗವಾಗಿ ಒಳಾಂಗಣ ಕ್ರೀಡಾಕೂಟಗಳೂ ಕಲ್ಯಾಣ ಮಂಟಪದಲ್ಲಿ ನಡೆಯಲಿವೆ.
ದೈಹಿಕ ಮನೋಲ್ಲಾಸಕ್ಕೆ ಕ್ರೀಡಾಕೂಟಗಳು ಸಹಕಾರಿ: ಜಿ.ರಾಜೇಂದ್ರ
ಮಾನಸಿಕ ಮತ್ತು ದೈಹಿಕ ಮನೋಲ್ಲಾಸಕ್ಕೆ ಕ್ರೀಡಾಕೂಟಗಳು ಸಹಕಾರಿಯಾಗಿದ್ದು, ಕ್ರೀಡಾಪಂದ್ಯಾವಳಿಗಳು ಜನಾಂಗಗಳ ಒಗ್ಗಟ್ಟಿಗೂ ಸಹಕಾರಿಯಾಗಿದೆ ಎಂದು ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಹೇಳಿದರು.
ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾ ಉತ್ಸವಗಳಿಗೆ ರಾಜ್ಯದಲ್ಲಿಯೇ ಕೊಡಗು ಹೆಸರುವಾಸಿಯಾಗಿದೆ. ಇದೀಗ ಬ್ರಾಹ್ಮಣ ಸಮಾಜ ಬಾಂಧವರು ಕೂಡ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ. ಜೀವನದಲ್ಲಿ ಅದೆಷ್ಟೇ ಸಂಪಾದಿಸಿದರೂ ಮನಸ್ಸು ಸಂಪೂರ್ಣ ತೃಪ್ತಿ ಹೊಂದಿರುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಸೇರಿದಾಗ ಮಾತ್ರ ಮನಸ್ಸು ಸಂಭ್ರಮಿಸುತ್ತದೆ. ವಿರಾಮರಹಿತ ಜೀವನಕ್ರಮದಿಂದಾಗಿ ಅನೇಕರು ಅಂತರ್ ಮುಖಿಯಾಗುತ್ತಿದ್ದಾರೆ. ಮೊಬೈಲ್ ಎಂಬ ನವತಾಂತ್ರಿಕತೆಯ ಸಾಧನ ಅಗತ್ಯಕ್ಕಿಂತ ಹೆಚ್ಚಾಗಿ ಬಳಕೆಯಾಗುತ್ತಿದೆ. ಕ್ರೀಡೆಯಂತೆ ಜೀವನ ಮತ್ತು ವೃತ್ತಿಯಲ್ಲಿ ಕೂಡ ಸ್ಪರ್ಧಾತ್ಮಕ ಮನೋಭಾವ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರು, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಎ.ಗೋಪಾಲಕೃಷ್ಣ, ಕಾರ್ಯದರ್ಶಿ ಅರುಣ್ ಕುಮಾರ್ ಸೋಮಯಾಜಿ, ನಿರ್ದೇಶಕರುಗಳಾದ ಭರತೇಶ್ ಖಂಡಿಗೆ, ಪುರುಷೋತ್ತಮ, ಇತರರು ಹಾಜರಿದ್ದರು.