

ಮೈಸೂರು: ವಿಪ್ರ ಸಮುದಾಯ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಮುದಾಯದವರು ಒಗ್ಗೂಡಬೇಕು ಎಂದು ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳ ಕರೆ ನೀಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಪ್ರ ವಾಣಿಜ್ಯೋದ್ಯಮಿಗಳ ಮಂತ್ರಾಲೋಚನೆ ಸಭೆಯಲ್ಲಿ ಮಾತನಾಡಿ, ಇತ್ತೀಚೆಗೆ ನಮ್ಮ ಸಮಾಜದಲ್ಲಿ ಹಲವಾರು ಸಮಸ್ಯೆಗಳು ಕಂಡು ಬರುತ್ತಿವೆ. ಎಲ್ಲರು ಒಗ್ಗೂಡಿದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ವಿಪ್ರರು ಕೇವಲ ಪಾಠ ಪ್ರವಚನ, ಸಾಂಸ್ಕೃತಿಕ ಆಚರಣೆಗೆ ಮಾತ್ರ ಸೀಮಿತವಾಗಿಲ್ಲ, ಉದ್ಯಮ ಕ್ಷೇತ್ರದಲ್ಲೂ ಹಲವರು ವಿಜಯ ಸಾಧಿಸಿದ್ದಾರೆ. ಅವರೆಲ್ಲರನ್ನು ಒಗ್ಗೂಡಿಸಿದರೆ ಸಮಾಜಕ್ಕೆ ಬಲ ದೊರೆಯುತ್ತದೆ. ನಮ್ಮ ಸಮಾಜದ ಅಭಿವೃದ್ಧಿಯ ಜತೆಗೆ ಇತರೆ ಸಮುದಾ ಯಕ್ಕೂ ಒಳಿತು ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಮಾತನಾಡಿ, ನಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಯಾವುದೇ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ತೋರಲು ಒಗ್ಗಟ್ಟಿನ ಅವಶ್ಯಕತೆ ಇದೆ. ಆರ್ಥಿಕವಾಗಿ ಸಮುದಾಯ ಹೆಚ್ಚು ಸದೃಢವಾಗಬೇಕು ಎಂದು ಹೇಳಿದರು.
ಎಲ್ಲ ಸಮಸ್ಯೆಗಳಿಗೂ ಬ್ರಾಹ್ಮಣರು ಕಾರಣ ಎಂದು ಇತ್ತೀಚೆಗೆ ಆರೋಪಿಸುವವರ ಸಂಖ್ಯೆ ಹೆಚ್ಚಾಗಿದೆ. ಸನಾತನ ಧರ್ಮವನ್ನು ದೂಷಣೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ರೂಪಾಶಾಸ್ತ್ರಿ, ಉದ್ಯಮಿಗಳಾದ ರವಿಶಾಸ್ತ್ರಿ, ಎಂ.ಕೆ. ಪುರಾಣಿಕ್, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಹಾಗೂ ಇತರರು ಇದ್ದರು.