

ಕಿಕ್ಕೇರಿ: ಓದಿನಷ್ಟೇ ನೈತಿಕ ಮೌಲ್ಯ ಮುಖ್ಯವಾಗಿದ್ದು, ತಮ್ಮ ಪ್ರತಿಭೆಗೆ ಭೂಷಣವಾಗಿ ರೂಪಿಸಿಕೊಳ್ಳುವಂತೆ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊ. ಎಂ.ಎಸ್.ಕೃಷ್ಣಮೂರ್ತಿ ಸಲಹೆ ನೀಡಿದರು.
ಇಲ್ಲಿನ ವಿಪ್ರ ಬಾಂಧವ ಸೇವಾ ಸಮಿತಿ ಸುಬ್ಬರಾಯ ಛತ್ರದಲ್ಲಿ ವಿಪ್ರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಗದು ಪ್ರೋತ್ಸಾಹ ಸಮಾರಂಭದಲ್ಲಿ ಮಾತನಾಡಿ, ವಿಪ್ರ ಸಮಾಜ ಜ್ಞಾನದಲ್ಲಿ ಮೇಲಾಗಿದೆ. ಆದರೆ ಸಮಾಜಕ್ಕೆ ಇದುವರೆವಿಗೂ ವಿಪ್ರ ಜಾತಿ ಪ್ರಮಾಣ ಪತ್ರ ಸರ್ಕಾರದಿಂದ ಸಿಗದಿರುವುದು ಬೇಸರವಾಗಿದೆ ಎಂದರು.
ಕಿಕ್ಕೇರಿ ಬಲು ದೊಡ್ಡ ಸಂಸ್ಕೃತಿಯ ತಾಣವಾಗಿದೆ. ಇಲ್ಲಿ ನಡೆಯುವ ಪ್ರತಿ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ. ವಿದ್ಯಾರ್ಥಿಗಳ ಜ್ಞಾನ ಶಿಕ್ಷಣಕ್ಕೆ ನೆರವಾಗುವ ಕೆಲಸ ಸರ್ವಶ್ರೇಷ್ಟವಾಗಿದೆ. ವಿವಿಧ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳನ್ನು ಗುರ್ತಿಸಿ ನೆರವು ನೀಡುವ ಕೆಲಸ ನಿರಂತರವಾಗಿರಲಿ ಎಂದು ಆಶಿಸಿದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪದವಿ, ಮೆಡಿಕಲ್, ಇಂಜಿನಿಯರಿಂಗ್ ಓದುತ್ತಿರುವ ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ನಿವೃತ್ತ ಶಿಕ್ಷಕ ಎಸ್.ಜಿ. ಸತ್ಯನಾರಾಯಣ, ಪಂಚಮಿ ಸೇವಾ ಸಮಿತಿ ಅಧ್ಯಕ್ಷ ಕೆ.ಎನ್.ಗೌರಿಶಂಕರ್, ಪಂಚಮಿ ಸೇವಾ ಸಮಿತಿ ಗೌರವಾಧ್ಯಕ್ಷ ಕೆ. ಆನಂದಮೂರ್ತಿ ಅವರನ್ನು ಗೌರವಿಸಲಾಯಿತು.
ಜಿಲ್ಲಾ ಬ್ರಾಹ್ಮಣ ಸಂಘದ ಮಾಜಿ ಅಧ್ಯಕ್ಷ ಎಸ್.ಶಂಕರನಾರಾಯಣಶಾಸ್ತ್ರಿ, ಬ್ರಾಹ್ಮಣ ಮಹಾಸಭಾ ತಾಲೂಕು ಅಧ್ಯಕ್ಷ ಅರವಿಂದ್ ಕಾರಂತ್, ಮೈಸೂರು ಹೊಯ್ಸಳ ಕರ್ನಾಟಕ ಸಂಘದ ಉಪಾಧ್ಯಕ್ಷೆ ಶ್ರೀಮತಿ, ಕಿಕ್ಕೇರಿ ಸಮಿತಿಯ ಕೆ.ಬಿ.ವೆಂಕಟೇಶ್, ಮಹಬಲಶರ್ಮ, ಕೆ.ಎಸ್.ಪರಮೇಶ್ವರಯ್ಯ, ಗಣೇಶ್‌ರಾವ್, ಕೆ.ಎಸ್.ಅನಂತಸ್ವಾಮಿ, ಸುರಭಿಶರ್ಮ ಮತ್ತಿತರರು ಉಪಸ್ಥಿತರಿದ್ದರು.