ತಿಕೋಟಾ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವಿಪ ಸದಸ್ಯ ಸುನೀಲಗೌಡ ಪಾಟೀಲ ಭೂಮಿ ಪೂಜೆ

MLC SUNILGOUDA BHOOMI POOJE
ತಿಕೋಟಾ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಭೂಮಿಪೂಜೆ ನೆರವೇಹಿಸಿ ಮಾತನಾಡಿದರು. ಹಿರೇಮಠದ ಶಿವಬಸವ ಶಿವಾಚಾರ್ಯ ಸ್ವಾಮೀಜಿ, ಸಿದ್ದು ಗೌಡನವರ, ಸೋಮನಾಥ ಬಾಗಲಕೋಟ ಮತ್ತಿತರರಿದ್ದಾರೆ.
Published on

ವಿಜಯಪುರ: ಮಳೆಗಾಲದಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳನ್ನು ತಪ್ಪಿಸಲು ಡಂಗುರ ಸಾರುವ ಮೂಲಕ ಜನಜಾಗೃತಿ ಮೂಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಿಕೋಟಾ ಪಟ್ಟಣದಲ್ಲಿ ಸೋಮವಾರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ರೂ. 1.50 ಕೋಟಿ ವೆಚ್ಚದ ತಿಕೋಟಾ ತಾಜಪೂರ ಎಚ್, ರೂ. 1.20 ಕೋಟಿ ವೆಚ್ಚದ ತಿಕೋಟಾ- ಐಟಿಐ ಕಾಲೇಜು ವರೆಗಿನ ರಸ್ತೆ, ರೂ. 1.20 ಕೋಟಿ ವೆಚ್ಚದ ತಿಕೋಟಾ ನಂದಿಕೋಲ ವರೆಗಿನ ರಸ್ತೆ ಸುಧಾರಣೆ ಭೂಮಿ ಪೂಜೆ ನೆರೆವೇರಿಸಲಾಗಿದೆ. ಅಲ್ಲದೇ, ರೂ. 25 ಲಕ್ಷ ವೆಚ್ಚದ ತಿಕೋಟಾ ರೈತ ಸಂಪರ್ಕ ಕೇಂದ್ರ ಗೋದಾಮಿನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಮಳೆಗಾಲದಲ್ಲಿ ಜಿಲ್ಲೆಯ ನಾನಾ ಕಡೆಗಳಲ್ಲಿ ವಿದ್ಯುತ್ ಸಂಬಂಧಿತ ಅವಘಡಗಳಲ್ಲಿ ಈಗಾಗಲೇ ಮಕ್ಕಳು ಸೇರಿದಂತೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮುಂಗಾರು ಆರಂಭವಾದ ನಂತರ ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ಮಳೆ-ಗಾಳಿಗೆ ತುಂಡಾಗಿ ಬಿದ್ದಿರುತ್ತವೆ. ಅಲ್ಲದೇ, ಹಲವು ಕಡೆ ಭೂಮಿಯಲ್ಲಿ ಹೆಚ್ಚಿನ ತೇವಾಂಶ ಇರುವ ಕಾರಣ ಕಂಬಗಳ ಸುತ್ತಮುತ್ತ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಕೃಷಿ ಮತ್ತಿತರ ಚಟುವಟಿಕೆಗಳಿಗಾಗಿ ರೈತರು ಮತ್ತು ಸಾರ್ವಜನಿಕರು ಪಂಪ್ಸೆಟ್ ಚಾಲೂ ಮಾಡುವಾಗ, ಕೆರೆ, ಬಾವಿಗಳ ಬಳಿ ತೆರಳುವಾಗ ಅಕ್ಕಪಕ್ಕದಲ್ಲಿ ವಿದ್ಯುತ್ ಕಂಬಗಳು ಇದ್ದರೆ ಎಚ್ಚರಿಕೆ ವಹಿಸಬೇಕು ಎಂದರು.

ಈ ನಿಟ್ಟಿನಲ್ಲಿ ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳಿಗೆ ವಿದ್ಯುತ್ ಸಂಬಂಧಿತ ಅವಘಡಗಳನ್ನು ತಪ್ಪಿಸಲು ಈಗಾಗಲೇ ಸೂಚನೆ ನೀಡಿದ್ದೇನೆ. ಅಲ್ಲದೇ, ಸ್ಥಳೀಯ ಸಂಸ್ಥೆಗಳಲ್ಲಿ ಈ ಕುರಿತು ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಲಾಗುವುದು ಎಂದರು.

ಬಳಿಕ ತಿಕೋಟಾ ತಾಲೂಕಿನ ಮುಮ್ಮೆಟ್ಟಿಗುಡ್ಡದ ಬಳಿ ಹಾಗೂ ನಿಡೋಣಿ ಬಳಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಸ್ಥಳೀಯ ಹಿರೇಮಠದ ಶಿವಬಸವ ಶಿವಾಚಾರ್ಯರು, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಪ್ರಭಾವತಿ ನಾಟಿಕಾರ, ಜಕ್ಕಪ್ಪ ಯಡವೆ, ಯಾಕೂಬ ಜತ್ತಿ, ವಿಜುಗೌಡ ಪಾಟೀಲ, ಡಾ. ಜಿ.ಎಸ್. ಮೈಶಾಳ, ತಹಸೀಲ್ದಾರ್ ಪ್ರಶಾಂತ ಚನಗೊಂಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net