

ವಿಜಯಪುರ: ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ ಯೋಜನೆ ಕೈ ಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಆಗ್ರಹಿಸಿ ದಿನದಿಂದ ದಿನಕ್ಕೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮಂಗಳವಾರ ಉಗ್ರ ಹೋರಾಟಕ್ಕೆ ಅಣಿಯಾದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಕೆಲ ಕಾಲ ವಶಕ್ಕೆ ಪಡೆಯಬೇಕಾಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ನೂರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಕೂಡಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಆಗ್ರಹಿಸಿದರು. ಪಿಪಿಪಿ ಮಾದರಿ ಕೈಬಿಡುವಂತೆ ಒತ್ತಾಯಿಸಿದರು. ಮುಂದುವರಿದು ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕಲೆತ್ನಿಸಿದಾಗಿ ಪೊಲೀಸರು ತಡೆದರು. ಮಾತಿನ ಚಕಮಕಿ ನಡೆದು ಪೊಲೀಸರು ಪ್ರಮುಖರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ವಿಜಯಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪಿಸಲು ಹೊರಟಿರುವುದು ಸ್ವಾಗತಾರ್ಹ. ಆದರೆ, ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುತ್ತಿರುವುದು ಖಂಡನೀಯ. ವೈದ್ಯಕೀಯ ಕಾಲೇಜು ಸ್ಥಾಪಿಸಲು ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ ಸಕಲ ಸೌಲಭ್ಯಗಳಿವೆ. ಅದಾಗ್ಯೂ ಖಾಸಗಿ ಸಹಭಾಗಿತ್ವಕ್ಕೆ ನೀಡುತ್ತಿರುವುದು ಸರ್ಕಾರಿ ವ್ಯವಸ್ಥೆ ಮಾರಾಟಕ್ಕಿಟ್ಟಂತಾಗಲಿದೆ ಎಂದರು.
ಈಗಾಗಲೇ ನಗರದಲ್ಲಿ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಇದೀಗ ಮಂಜೂರಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜನ್ನೂ ಖಾಸಗಿ ಸಹಭಾಗಿತ್ವಕ್ಕೆ ನೀಡುವುದು ಯಾವ ನ್ಯಾಯ ? ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರ ಮಕ್ಕಳು ವೈದ್ಯರಾಗಬೇಕು ಎಂಬ ಕನಸನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಆದರೆ ಲಕ್ಷಾಂತರ ರೂಪಾಯಿ ಹಣ ನೀಡಿ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಓದಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅನೇಕರು ವೈದ್ಯಕೀಯ ಶಿಕ್ಷಣದಿಂದ ವಂಚಿತಗೊಳ್ಳಬೇಕಾಗುತ್ತದೆ. ಶಿಕ್ಷಣ ಎನ್ನುವುದು ಕೇವಲ ಹಣವಂತರ ಸ್ವತಲ್ಲ, ಅದು ಸರ್ವರಿಗೂ ಸಿಗುವಂತಾಗಬೇಕು, ಅದನ್ನು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ತಲುಪಿಸುವ ಜವಾಬ್ದಾರಿ ಸರ್ಕಾರಗಳದ್ದು .ಆ ಕಾರ್ಯ ಸರ್ಕಾರಗಳು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ಮುಖಂಡ ಹರ್ಷ ನಾಯಕ ಮಾತನಾಡಿ, ವೈದ್ಯರನ್ನು ಸಾಕ್ಷಾತ್ ದೇವರೆಂದು ಪರಿಗಣಿಸಲಾಗುತ್ತದೆ. ಒಬ್ಬ ವೈದ್ಯನು ರೋಗಿಗಳ ವಿಷಯದಲ್ಲಿ ತನ್ನ ಪರಧಿಯಲ್ಲಿ ಸರ್ವಕಾಲ ಸರ್ವಾವಸ್ಥೆಯಲ್ಲೂ ರಕ್ಷಕನ ಪಾತ್ರವನ್ನು ಪೋಷಿಸುತ್ತಾನೆ. ಆದ್ದರಿಂದ, ದೇವರ ಸಮಾನವಾದ ವೈದ್ಯರ ಶಿಕ್ಷಣವನ್ನು ಖಾಸಗಿಗೆ ನೀಡುವುದರಿಂದ ಬಡವರಿಗೆ ನ್ಯಾಯ ಕಲ್ಪಿಸಲಾಗುವುದಿಲ್ಲ ಎಂದರು.
ಪ್ರಮುಖರಾದ ಸುಜ್ಞಾತಾ ಕುಲಕರ್ಣಿ, ಮಲ್ಲಿಕಾರ್ಜುನ ಮಾಳಿ, ಮಂಜುನಾಥ ಹಳ್ಳಿ, ಸಂದೀಪ ಅರಳಗುಂಡಿ, ಶಶಿಕಾಂತ ರಾಕ್ಲೆ, ಐಶ್ವರ್ಯ ಆಸಂಗಿ, ಪ್ರವೀಣ ಬಿರಾದಾರ, ಸ್ನೇಹಾ ಹಿರೇಮಠ, ಚೇತನ ಕೋರವಾರ, ಬಸವರಾಜ ಪೂಜಾರಿ, ಬಾಲಾಜಿ ಬಿರಾದಾರ, ಸುನೀಲ ರಾಠೋಡ, ತ್ರಿಶಲಾ ರಾಠೋಡ, ದಾನಮ್ಮ ಹೊಸಮನಿ ಮತ್ತಿತರರಿದ್ದರು.