ಸರ್ಫೇಸಿ ಕಾಯ್ದೆ ರದ್ದುಗೊಳಿಸದಿದ್ದರೆ ಉಗ್ರ ಹೋರಾಟ

mdg 3 (2)
Published on

ಮೂಡಿಗೆರೆ: ಕೇಂದ್ರ ಸರ್ಕಾರ ಸರ್ಫೇಸಿ ಕಾಯ್ದೆ ಜಾರಿಗೊಳಿಸಿ ರೈತರ ಮೇಲೆ ಸವಾರಿ ನಡೆಸುತ್ತಿದೆ. ಸಾಲ ಮರುಪಾವತಿ ವಿಳಂಬವಾದರೆ ಆನ್‌ಲೈನ್ ಮೂಲಕ ಜಮೀನು ಹರಾಜು ಮಾಡಲಾಗುತ್ತಿದೆ. ರೈತರಿಗೆ ಮಾರಕವಾದ ಸರ್ಫೇಸಿ ಕಾಯ್ದೆ ಕೈಬಿಡದಿದ್ದರೆ ರೈತರು ಮತ್ತು ಕಾರ್ಮಿಕರು ತಮ್ಮ ಕೆಲಸವನ್ನು ನಿಲ್ಲಿಸ ಹೋರಾಟ ನಡೆಸಲಿದ್ದಾರೆ ಎಂದು ರೈತ ಸಂಘ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸರ್ಫೇಸಿ ಕಾಯ್ದೆಯಡಿ ಆನ್‌ಲೈನ್ ಮೂಲಕ ಹರಾಜು ಹಾಕಿದ್ದರಿಂದ ಬೇಸತ್ತ ದೇವವೃಂದ ಗ್ರಾಮದ ರೈತ ದಂಪತಿ ವಿಜಯ್ ಮತ್ತು ಪಾರ್ವತಿ ದಯಮರಣಕ್ಕಾಗಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದ ಸಂತ್ರಸ್ತ ವಿಜಯ್ ಮನೆಗೆ ಭೇಟಿ ನೀಡಿ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಸರ್ಫೇಸಿ ಕಾಯ್ದೆ ಹಿಂಪಡೆಯಬೇಕು ಎಂದು ಸದನದಲ್ಲಿ ಒತ್ತಾಯಿಸಿದ ಬಳಿಕ ಮೂಡಿಗೆರೆಯಲ್ಲಿ 3 ಸಾವಿರ ರೈತರಿಗೆ ಬ್ಯಾಂಕ್‌ಗಳು ನೋಟಿಸ್ ನೀಡಿದೆ. ಸರ್ಫೇಸಿ ಕಾಯ್ದೆ ವ್ಯಾಪ್ತಿಗೆ ಕಾಫಿ ಬರುವುದಿಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಕಾಯ್ದೆ ಜಾರಿಗೊಂಡ ಬಳಿಕ ಶೇ.65ರಷ್ಟು ಕಾಫಿ ತೋಟ ಬೆಳೆಗಾರರ ಕೈಯಿಂದ ತಪ್ಪಿ ಹೋಗಿದೆ. ಅಂತಹ ತೋಟಗಳು ಬಂಡವಾಳ ಶಾಹಿಗಳ ಪಾಲಾಗಿದೆ. ಸರ್ಫೇಸಿ ಕಾಯ್ದೆಯಿಂದ ವಿಜಯ್ ಮತ್ತು ಪಾರ್ವತಿ ದಂಪತಿಗಳ ಕಾಫಿ ತೋಟ ಉದ್ಯಮಿಗಳಿಗೆ ಹರಾಜು ಮಾಡಿದೆ. ಹರಾಜಿನಲ್ಲಿ ಖರೀದಿಸಿರುವ ವ್ಯಕ್ತಿ ತೋಟಕ್ಕೆ ಪ್ರವೇಶಿಸಲು ಬಂದರೆ ಗೋ ಬ್ಯಾಕ್ ಚಳವಳಿ ನಡೆಸಲಾಗುವುದು. ಇಷ್ಟಾದರೂ ಜನಪ್ರತಿನಿಧಿಗಳು, ಕೆಜಿಎಫ್ ಅಧ್ಯಕ್ಷರು, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಅವರು ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿಲ್ಲ ಎಂದು ದೂರಿದರು.

ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಗುರುಶಾಂತಪ್ಪ, ಕೆಪಿಸಿಸಿ ವಕ್ತಾರ ರವೀಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಂಜಪ್ಪ, ಸಿಪಿಐ ಜಿಲ್ಲಾ ಮುಖಂಡ ಬಿ.ಕೆ.ಲಕ್ಷ್ಮಣ್ ಕುಮಾರ್, ಹ್ಯಾರಗುಡ್ಡೆ ಸುರೇಂದ್ರ, ರಾಜೇಂದ್ರ ಕಣಚೂರು, ಡಿ.ಜಿ.ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net