

ಬೆಳಗಾವಿ: ದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕೋಮುಗಲಭೆ ತಡೆಗಟ್ಟುವುದಕ್ಕೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಬಡ ಯುವಜನಾಂಗಕ್ಕೆ ಉದ್ಯೋಗ ಸೃಷ್ಟಿಸಬೇಕು ಎಂದು ಒತ್ತಾಯಿಸಿ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮನ್ ಬೆಳಗಾವಿ ಘಟಕದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಪ್ರದಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬುಧವಾರ ಮನವಿ ರವಾನಿಸಲಾಯಿತು. ಮಣಿಪುರದಲ್ಲಿ ಮಹಿಳೆ ಮೇಲೆ ಅತ್ಯಾಚಾರಗೈದ ತಪ್ಪಿತಸ್ಥರಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು. ಹರಿಯಾಣದಲ್ಲಿ ನಡೆಯುತ್ತಿರುವ ಕೋಮುಗಲಭೆ ತಡೆದು ದೇಶದ ಯಾವುದೇ ಮೂಲೆಯಲ್ಲೂ ಇಂತಹ ಪ್ರಕರಣಗಳು ಮರುಕಳಿಸದಂತೆ ಕಠಿಣ ಕ್ರಮ ಜರುಗಿಸಿ ದುಷ್ಟರನ್ನು ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.
ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿಯೂ ನಿತ್ಯವೂ ನೂರಾರು ಜನ ವಂಚನೆಗೊಳಪಡುತ್ತಿದ್ದಾರೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸಕಾಲಕ್ಕೆ ಕೂಲಿ ಸಿಗುವಂತೆ ಮುತುವರ್ಜಿ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಜಿಲ್ಲಾ ಘಟಕದ ಅಧ್ಯಕ್ಷೆ ಕೆ.ಎನ್.ಸಾತೇರಿ, ಉಪಾಧ್ಯಕ್ಷೆ ಉಮಾದೇವಿ ಮಾನೆ, ಕಾರ್ಯದರ್ಶಿ ಕಲಾ ಕಾರ್ಲೇಕರ್, ರಾಷ್ಟ್ರೀಯ ಪರಿಷತ್ ಸದಸ್ಯೆ ಮೀರಾ ಮಾದರ ಹಾಗೂ ಮಂಜುಶಾ ಮಾನೆ ಇತರರು ಇದ್ದರು.