ಹಿಂದುಗಳ ಮೇಲಿನ ದೌರ್ಜನ್ಯ ನೀಚ ಕೃತ್ಯ

FotoJet
Published on

ಬಿಜೆಪಿ ಮಾಧ್ಯಮ ವಕ್ತಾರ ಚಂದ್ರಶೇಖರ್ ಆಕ್ರೋಶ ಬಾಂಗ್ಲಾದ ನಾಯಕ ಯೂನಿಸ್ ಮತಾಂಧ ಎಂದು ಕಿಡಿ

ಗೌರಿಬಿದನೂರು: ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ನಾಗರಿಕ ಪ್ರಪಂಚ ತಲೆತಗ್ಗಿಸುವಂತಹ ನೀಚ ಕೃತ್ಯವಾಗಿದೆ ಎಂದು ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಎಂ.ಜಿ. ವೃತ್ತದಲ್ಲಿ ತಾಲೂಕು ಬಿಜೆಪಿ, ಹಿಂದು ಜಾಗರಣಾ ವೇದಿಕೆ, ಬಜರಂಗ ದಳ ಸೋಮವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಇಡೀ ವಿಶ್ವವೇ ಸನಾತನ ಹಿಂದು ಧರ್ಮವನ್ನು ಮೆಚ್ಚಿದೆ. ನಮ್ಮ ನಡೆ ನುಡಿ ಸಂಪ್ರದಾಯಗಳ ಆಚರಣೆಗಳನ್ನು ಎಲ್ಲ ದೇಶಗಳು ಕೊಂಡಾಡುತ್ತಿವೆ. ವಿಶ್ವಗುರುವಾಗುವತ್ತ ದೇಶ ಸಾಗುತ್ತಿದೆ. ಆದರೆ, ಪಕ್ಕದ ಬಾಂಗ್ಲಾದೇಶದಲ್ಲಿ ಹಿಂದುಗಳನ್ನು ಹೀನಾಯವಾಗಿ ನೋಡುತ್ತಿದ್ದು, ಅನ್ನ ನೀಡಿದ ಇಸ್ಕಾನ್ ದೇವಾಲಯಗಳನ್ನು ಧ್ವಂಸ ಮಾಡುತ್ತಿದ್ದಾರೆ. ಭಾರತೀಯ ವಸ್ತುಗಳನ್ನು ಸುಡಲಾಗುತ್ತಿದೆ. ನಮ್ಮಿಂದ ಆರ್ಥಿಕ ಸಹಾಯ ಪಡೆದು ಈಗ ಹಿಂದುಗಳ ಮೇಲೆ ದೌರ್ಜನ್ಯ ಹಾಗೂ ದೇವಾಲಯ ಧ್ವಂಸ ಮಾಡುತ್ತಿರುವುದು ಖಂಡನೀಯ. ಬಾಂಗ್ಲಾದೇಶದ ಯೂನಿಸ್ ಒಬ್ಬ ಮತಾಂಧ. ದೇಶ ನಾಶ ಮಾಡಲು ಹುಟ್ಟಿರುವ ಪಾಪಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡ ಡಾ.ಎಚ್.ಎಸ್.ಶಶಿಧರ್, ತಾಲೂಕು ಅಧ್ಯಕ್ಷ ರಮೇಶ್‌ರಾವ್, ನಗರಸಭೆ ಸದಸ್ಯರಾದ ಮಾರ್ಕೆಟ್ ಮೋಹನ್, ಡಿ.ಎನ್.ವೆಂಕಟರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ, ಮುಖಂಡರಾದ ಎಚ್.ಆರ್.ಗೊವೀಂದರಾಜ್, ವಕೀಲ ರಂಗನಾಥ್, ವಿ.ಸಿ.ಗಂಗಯ್ಯ, ಮಹಿಳಾ ಘಟಕದ ಮುನಿಲಕ್ಷ್ಮಮ್ಮ ಗಂಗಲಕ್ಷಮ್ಮ, ಜಯಣ್ಣ, , ನರಸಿಂಹರೆಡ್ಡಿ, ಹಿಂದು ಜಾಗರಣಾ ವೇದಿಕೆ ಸಾಗನಹಳ್ಳಿ ಶಿವಕುಮಾರ್, ರಾಘವ ಮುಂತಾದವರು ಭಾಗವಹಿಸದ್ದರು.

ಮೋದಿ ಏಳಿಗೆ ಸಹಿಸುತ್ತಿಲ್ಲ

ಪ್ರಧಾನಿ ಮೋದಿ ಅವರ ಏಳಿಗೆಯನ್ನು ಕಾಂಗ್ರೆಸ್ ಸಹಿಸುತ್ತಿಲ್ಲ. ಮೋದಿ ದಲಿತ ವಿರೋಧಿ, ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಕಳೆದ ಲೋಕಸಭೆ ಚುನಾವಣೆ ವೇಳೆ ಅಪಪ್ರಚಾರ ನಡೆಸಿದರು. ಆದರೆ ಹರಿಯಾಣದಲ್ಲಿ ದಲಿತ ಆದಿವಾಸಿಗಳು ಬಿಜೆಪಿ ಬೆಂಬಲಿಸುವ ಮೂಲಕ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಿದ್ದಾರೆ. ಇಡೀ ದೇಶವೇ ಬಾಂಗ್ಲಾ ಕೃತ್ಯಕ್ಕೆ ಧ್ವನಿ ಎತ್ತಿ ಪ್ರತಿಭಟನೆ ಮಾಡುತ್ತಿರುವಾಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಿಂಚಿತ್ತೂ ವಿರೋಧ ವ್ಯಕ್ತಪಡಿಸಿಲ್ಲ. ಬದಲಾಗಿ ದೇಶದ್ರೋಹಿಗಳ ಪ್ರಕರಣ ಮುಚ್ಚಿ ಹಾಕಿ ಕುಮ್ಮಕ್ಕು ನೀಡಿದೆ ಎಂದು ಚಂದ್ರಶೇಖರ್ ವಾಗ್ದಾಳಿ ನಡೆಸಿದರು.

ಬೃಹತ್ ಮೆರವಣಿಗೆ

ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರದ ಹಿಂದು ವಿರೋಧಿ ದೋರಣೆ ಖಂಡಿಸಿ ಧಿಕ್ಕಾರ ಕೂಗುತ್ತಾ ನಗರದ ಶನಿಮಹಾತ್ಮ ದೇವಾಲಯದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಾಂಗ್ಲಾದೇಶಕ್ಕೆ ಆರ್ಥಿಕ ದಿಗ್ಬಂಧನ ಹಾಕಬೇಕು. ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ಬಾಂಗ್ಲಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಉದ್ದೇಶಪೂರ್ವಕ ಕೃತ್ಯ

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ ಮಾತನಾಡಿ, ನಮ್ಮದು ಶಾಂತಿ ದೇಶ. ಆದರೆ ಆರ್ಥಿಕವಾಗಿ ದಿಕ್ಕೆಟ್ಟು ಹೀನಾಯ ಸ್ಥಿತಿಗೆ ತಲುಪಿರುವ ನೆರೆಹೊರೆಯ ದೇಶಗಳು ಉದ್ದೇಶಪೂರ್ವಕವಾಗಿ ಹಿಂದುಗಳ ಮೇಲೆ ದೌರ್ಜನ್ಯ ಎಸಗುತ್ತಿವೆ. ಇದು ಹೆಚ್ಚು ದಿನ ಮುಂದುವರಿಯುವುದಿಲ್ಲ. ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು. ಶಾಶ್ವತ ಪರಿಹಾರ ಸೂಚಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net