

ಮದ್ದೂರು : ಪ್ರಸ್ತುತ ದಿನಗಳಲ್ಲಿ ಹದಿಹರೆಯದ ಮಕ್ಕಳು ಮತ್ತು ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ಹಲ್ಲೆ, ಅತ್ಯಾಚಾರದಂತಹ ಪ್ರಕಣಗಳು ನಡೆಯುತ್ತಿರುವುದು ಆತಂಕಕಾರಿ ವಿಚಾರ ಎಂದು ಹೊಂಬಾಳೆ ಎಜುಕೇಷನ್ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಬಸವರಾಜು ತಿಳಿಸಿದರು.
ಪಟ್ಟಣದ ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ರಕ್ಷಣೆ ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ದೌರ್ಜನ್ಯಕ್ಕೊಳಗಾದ ವೇಳೆ ತುರ್ತು ವೈದ್ಯಕೀಯ ಹಾಗೂ ಮಾನಸಿಕ ನೆರವು ಒದಗಿಸುವ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ಸುರಕ್ಷಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಲೈಂಗಿಕ ದೌರ್ಜನ್ಯ, ಶೋಷಣೆ, ಕಿರುಕುಳ, ಅಶ್ಲೀಲ ಚಿತ್ರಣ ಮತ್ತು ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಲು ಅಗತ್ಯ ಕ್ರಮ ವಹಿಸಲು ಇಲಾಖೆ ಹತ್ತು ಹಲವು ನಿಯಮಗಳನ್ನು ಜಾರಿಗೊಳಿಸಿದೆ ಎಂದರು.
ರಾಜ್ಯ ಮಟ್ಟದ ಸಂಶೋಧನಾ ವಿಭಾಗದ ಕಾರ್ಯದರ್ಶಿ ರಾಣಿಚಂದ್ರಶೇಖರ್ ಮಾತನಾಡಿ, ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಮುಂದಾಗುವ ಜತೆಗೆ ವ್ಯಾಸಂಗದ ಜತೆಯಲ್ಲಿಯೇ ಶಿಸ್ತು, ಗುರಿ, ಸಾಧನೆಯನ್ನು ಮೈಗೂಡಿಸಿಕೊಂಡು ಯಾವುದೇ ಅಪರಾಧದಂತಹ ಕೃತ್ಯಗಳಲ್ಲಿ ಭಾಗಿಗಳಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದರು.
ಮಕ್ಕಳಿಗೆ ಹಲ್ಲೆ ಮತ್ತು ದೌರ್ಜನ್ಯ ಮಾಡುವುದು ಕಾನೂನು ರೀತಿಯ ಅಪರಾಧವಾಗಿದ್ದು ಅಂತಹ ಕೃತ್ಯ ಎಸಗುವವರಿಗೆ ಕಠಿಣ ಕಾನೂನು ಶಿಕ್ಷೆಗೆ ಗುರಿ ಪಡಿಸಬಹುದಾಗಿದ್ದು ಯಾವುದೇ ರೀತಿಯ ಹಲ್ಲೆ ದೌರ್ಜನ್ಯಗಳು ನಡೆಯದಂತೆ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು, ಪಾಲಕರು ಇಲಾಖೆಯೊಟ್ಟಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ನಗರಸಭೆ ಸದಸ್ಯ ಬಿ.ಸಿ.ಸರ್ವಮಂಗಳಾ ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಸಿಇಒ ಎಂ.ಎಸ್.ಸಂತೋಷ್‌ಗೌಡ, ಟ್ರಸ್ಟಿ ಕಲ್ಪಿತಾ ಸಂತೋಷ್, ಮುಖ್ಯಶಿಕ್ಷಕಿ ಎ.ವಿ.ಪಾವನಾ, ಸಹಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.