

ಚಿಕ್ಕಬಳ್ಳಾಪುರ: ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಡ್ಡ ಮತದಾನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನ.13 ಕ್ಕೆ ಮುಂದೂಡಲಾಗಿದೆ.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ 5 ಸದಸ್ಯರ ಪರವಾಗಿ ವಕೀಲ ಪಿ. ಸುಬ್ರಮಣಿ ಹಾಜರಾಗಿದ್ದರು. ಇದರ ನಡುವೆ ದೂರುದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಯಿತು.
ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರಾದ ನಿರ್ಮಲ ಪ್ರಭು, ಸತೀಶ್, ಸ್ವಾತಿ ಮಂಜುನಾಥ್, ಅಂಬಿಕಾ ನಾರಾಯಣಸ್ವಾಮಿ, ನೇತ್ರಾವತಿ, ರತ್ನಮ್ಮ ಅಡ್ಡ ಮತದಾನ ಚಲಾಯಿಸಿ, ಪಕ್ಷದ ವಿಪ್ ಆದೇಶ ಉಲ್ಲಂಘಿಸಿದ್ದಾರೆ. ಇದಕ್ಕೆ ಪಕ್ಷಾಂತರ ಕಾಯ್ದೆ ಮತ್ತು ಪಕ್ಷ ವಿರೋಧಿ ಚಟುವಟಿಕೆ ಕಾಯ್ದೆಯಡಿ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮತ್ತು ನಗರಸಭಾ ಸದಸ್ಯ ಅಂಬರೀಷ್ ಮನವಿ ಮಾಡಿದ್ದಾರೆ. ಇದರಿಂದ ಸಂಬಂಧಪಟ್ಟ ಸದಸ್ಯರಿಗೆ ನ.6 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಇದರಿಂದ ಸದಸ್ಯೆ ನೇತ್ರಾವತಿ ಹೊರತುಪಡಿಸಿದಂತೆ ಇತರೆ ಐವರು ಸದಸ್ಯರ ಪರವಾಗಿ ವಕೀಲ ಸುಬ್ರಮಣಿ ಹಾಜರಾಗಿದ್ದರು. ತಕರಾರು ಅರ್ಜಿ ಸಲ್ಲಿಸಲು ಮುಂದಾಗಿದ್ದರು. ಇದರ ನಡುವೆ ದೂರುದಾರರ ಪರ ವಕೀಲರು ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಯಿತು.