

ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘಿಸುವವರಿಗೆ ಮೊದಲ ದಿನವೇ ಶಿವಮೊಗ್ಗದಲ್ಲಿ ಬಿಸಿ ಮುಟ್ಟಿದೆ. ಪ್ರಮುಖ 13 ವೃತ್ತಗಳಲ್ಲಿ ಅಳವಡಿಸಿರುವ ಅತ್ಯಾಧುನಿಕ ಸಿಸಿ ಕ್ಯಾಮರಾಗಳು ಕಮ್ಯಾಂಡ್ ಸೆಂಟರ್‌ಗೆ ಕಳುಹಿಸಿದ ಚಿತ್ರಗಳನ್ನು ಆಧರಿಸಿ ಸೋಮವಾರ 655 ಮಂದಿಗೆ ದಂಡ ವಿಧಿಸಿ ಮೊಬೈಲ್ ಸಂದೇಶ ಕಳುಹಿಸಲಾಗಿದೆ.
ಆ.28ರಿಂದ ಕಟ್ಟುನಿಟ್ಟಾಗಿ ಸಂಚಾರ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ವಾರದ ಹಿಂದೆಯೇ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಎಚ್ಚರಿಕೆ ನೀಡಿದರೂ ಮೊದಲ ದಿನವೇ ನಿಯಮ ಉಲ್ಲಂಘನೆ ಮಾಡಿದವರ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ.
ಪ್ರಮುಖವಾಗಿ ಆಲ್ಕೊಳ ವೃತ್ತ, ಪ್ರವಾಸಿ ಮಂದಿರದ ವೃತ್ತ, ಶಿವಮೂರ್ತಿ ವೃತ್ತ, ಮಹಾವೀರ ವೃತ್ತಗಳಲ್ಲಿ ಹೆಚ್ಚು ಮಂದಿ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ. ಇನ್ನು ಸಮರ್ಪಕ ದಾಖಲೆ ಹೊಂದಿರದೇ ವಾಹನ ಚಲಾಯಿಸಿದವರು ಪೊಲೀಸರು ದಂಡ ವಿಧಿಸಿದವರ ಪಟ್ಟಿಯಲ್ಲಿಲ್ಲ.