ನೇತಾರರಿಂದಲೇ ನಿಯಮ ಉಲ್ಲಂಘನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಆಹಾರ ಕಿಟ್ ವಿತರಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

21-KND-PHOTO-1B
Published on

ಕುಂದಾಣ: ಕರೊನಾ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪ್ರತಿದಿನ ಮನವಿ ಮಾಡುತ್ತಲೇ ಇವೆ. ಆದರೆ ನಿಯಮ ಪಾಲನೆ ಬಗ್ಗೆ ಸಾರ್ವಜನಿಕರಿಗೆ ತಿಳಿಹೇಳಬೇಕಾದ ಜನಪ್ರತಿನಿಧಿಗಳೇ ಸಾಮಾಜಿಕ ಅಂತರ ನಿಯಮ ಗಾಳಿಗೆ ತೂರುತ್ತಿದ್ದಾರೆ.

ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ಕೊಯಿರಾ ಗ್ರಾಮದಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಮತ್ತು ಶಾಸಕ ಮಾಜಿ ಸಚಿವ ಕೃಷ್ಣಭೈರೇಗೌಡ ಭಾಗವಹಿಸಿದ್ದ ಆಹಾರ ಪದಾರ್ಥಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಗಾಳಿಗೆ ತೂರಲಾಗಿತ್ತು. ಸಾವಿರಾರು ಜನ ಜಮಾವಣೆಗೊಂಡು ನೂಕು-ನುಗ್ಗಲು ಏರ್ಪಟ್ಟಿತ್ತು.

ಸಾರ್ವಜನಿಕರು ಒಬ್ಬರ ಮೇಲೆ ಮತ್ತೊಬ್ಬರು ತಳ್ಳಾಡಿಕೊಂಡೇ ಆಹಾರ ಕಿಟ್ ಪಡೆಯುತ್ತಿದ್ದ ದೃಶ್ಯ ಕಂಡುಬಂತು. ಜನಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರು ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಗೊಡವೆಗೆ ಹೋಗದೆ, ಜನರ ಗುಂಪಿನಲ್ಲಿ ಬೆರೆತು ಹೋಗಿದ್ದರು.

ಪೊಲೀಸರೂ ಮೌನ: ಸ್ಥಳದಲ್ಲಿದ್ದ ವಿಶ್ವನಾಥಪುರ ಪೊಲೀಸರು ಸೇರಿ ಇಡಿ ಪೋಲಿಸ್ ಇಲಾಖೆ ಮೂಕ ಪ್ರೇಕ್ಷಿಕರಂತೆ ನೋಡುತ್ತ ನಿಂತಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆಯನ್ನೂ ನೀಡಲಿಲ್ಲ.

ಕರೊನಾ ವೈರಸ್ ಇಡೀ ಜಗತ್ತನೆ ತಲ್ಲಣಿಸುವಂತೆ ಮಾಡಿದ್ದರೂ ಸಾರ್ವಜನಿಕರು ಸರ್ಕಾರ ಯಾವುದೋ ರಜೆ ಘೋಷಿಸಿದೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳು ಆಹಾರ ಕಿಟ್ ವಿತರಣೆಯಂತ ಕಾರ್ಯಕ್ರಮದ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ಮಾಜಿ ಶಾಸಕ ಕೆ.ವೆಂಕಟ ಸ್ವಾಮಿ, ಸಮಾಜಸೇವಕ ದ್ಯಾವರಹಳ್ಳಿ ಶಾಂತಕುಮಾರ್, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಸಕೋಟೆ ಮುನಿಶಾಮಯ್ಯ, ಗ್ರಾ.ಪಂ ಅಧ್ಯಕ್ಷೆ ಕೊಯಿರಾ ಅಂಜಿಲಿ ನಂಜೇಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net