

ವಿಜಯವಾಣಿ ಸುದ್ದಿಜಾಲ ಮಂಗಳೂರು
ರಾಷ್ಟ್ರೀಯ ಹೆದ್ದಾರಿ ಅಗಲ ಸಂದರ್ಭ ಹಸಿರು ರಾಷ್ಟ್ರೀಯ ಹೆದ್ದಾರಿ ನಿಯಮ 2015 ಉಲ್ಲಂಘನೆ ವಿರುದ್ದ ರಾಷ್ಟ್ರೀಯ ಹಸಿರು ಪೀಠ (ಯನ್‌ಜಿಟಿ) ದಲ್ಲಿ ದಾವೆ ಹೂಡಲು ಸೊಸೈಟಿ ಫಾರ್ ಫಾರೆಸ್ಟ್, ಎನ್‌ವೈರನ್‌ಮೆಂಟ್ ಆ್ಯಂಡ್ ಕ್ಲೈಮೆಟ್ ಚೇಂಜ್ ಮುಂದಾಗಿದೆ.
ಪ್ರಸ್ತಾವಿತ ನಿಯಮ ಪ್ರಕಾರ ರಾಷ್ಟ್ರೀಯ ವಿಸ್ತರಣೆ ಸಂದರ್ಭ ಅಡ್ಡ ಬರುವ ಮರಗಳನ್ನು ಗರಿಷ್ಠ ಪ್ರಕರಣಗಳಲ್ಲಿ ಸ್ಥಳಾಂತರಿಸಬೇಕು. ಒಂದು ಮರಕ್ಕೆ ಬದಲಾಗಿ 10 ಗಿಡಗಳನ್ನು ನೆಡಬೇಕು . ಈ ಎರಡು ಕೆಲಸಗಳನ್ನು ನೈಪುಣ್ಯ ಪಡೆದ ಗುತ್ತಿಗೆದಾರರಿಂದಲೇ ಮಾಡಿಸಬೇಕು. ಆದರೆ ನಿಯಮವನ್ನು ಪೂರ್ಣ ಪ್ರಮಾಣದಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಸೊಸೈಟಿ ಫಾರ್ ಫಾರ್ ಫಾರೆಸ್ಟ್, ಎನ್‌ವೈರನ್‌ಮೆಂಟ್ ಆ್ಯಂಡ್ ಕ್ಲೈಮೆಟ್ ಚೇಂಜ್ ಕಾರ್ಯದರ್ಶಿ ಬೆನೆಡಿಕ್ಟ್ ಫೆರ್ನಾಂಡಿಸ್ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಕರ್ನಕಟ್ಟೆ- ಸಾಣೂರು, ಶೃಂಗೇರಿ- ಮಾಳ, ನಂತೂರು ಬ್ಲಾೃಕ್ ಸ್ಪೋಟ್ ಸಹಿತ ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸುವ ಎಲ್ಲ ಕಾಮಗಾರಿಗಳಲ್ಲಿ ನಿಯಮ ಪಾಲನೆಯಾಗುತ್ತಿಲ್ಲ ಎನ್ನುವುದು ನಾವು ಆರ್‌ಟಿಐ ಅನ್ವಯ ಪಡೆದ ಮಾಹಿತಿ ಪ್ರಕಾರ ರುಜುವಾತಾಗಿದೆ. ಈ ಬಗ್ಗೆ ನಮ್ಮ ಸಂಸ್ಥೆಯ ವತಿಯಿಂದ ರಾಷ್ಟ್ರೀ ಹೆದ್ದಾರಿ ಪ್ರಾಧಿಕಾರದ ಎಲ್ಲ ಉನ್ನತ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಇಲ್ಲಿಯ ತನಕ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆಕ್ಷೇಪಿಸಿದರು.
* ಮರ ಪ್ರಾಧಿಕಾರ ಇಲ್ಲ
ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976 ಅನ್ವಯ ನಗರ, ಪಟ್ಟಣ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಮರ ಪ್ರಾಧಿಕಾರ (ಟ್ರೀ ಅಥೋರಿಟಿ) ಸ್ಥಾಪಿಸಬೇಕು ಎನ್ನುವ ನಿಮವಿದ್ದರೂ ಕಳೆದ 46 ವರ್ಷಗಳಿಂದ ಈ ಕಾನೂನನ್ನು ದಫನ ಮಾಡಲಾಗಿದೆ ಎಂದು ಸೊಸೈಟಿಯ ಸದಸ್ಯೆ ಆರತಿ ಅಶೋಕ್ ಆರೋಪಿಸಿದರು.
ಮರ ಪ್ರಾಧಿಕಾರವು ತನ್ನ ಆಧೀನದಲ್ಲಿ ಬರುವ ಎಲ್ಲ ಜಮೀನುಗಳಲ್ಲಿ (ಖಾಸಗಿ ಮತ್ತು ಸರ್ಕಾರಿ) ಗಿಡ ಮರಗಳನ್ನು ನೆಡುವುದನ್ನು ಖಚಿತಪಡಿಸುವುದು, ಮರಗಳ ಜಾತಿಯನ್ನು ನಿರ್ದಿಷ್ಟಪಡಿಸುವುದು ಮತ್ತು ನಿಗದಿಪಡಿಸಿದ ಅವಧಿಯಲ್ಲಿ ನೆಟ್ಟು ಬೆಳೆಸುವ ಕೆಲಸ ಮುಗಿದಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಅಧ್ಯಕ್ಷೆ ಹರಿಣಿ ಸದಸ್ಯರಾದ ಅಶ್ವಿನಿ, ಅರುಣ್ ಶೆಣೈ ಉಪಸ್ಥಿತರಿದ್ದರು.