ತಹಸೀಲ್ದಾರ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು

Hrr31 Mla 3
Published on

ಹರಿಹರ: ಗೃಹಲಕ್ಷಿ ್ಮ ಯೋಜನೆ ಚಾಲನಾ ಸರ್ಕಾರಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಶಿಷ್ಠಾಚಾರ ನಿಯಮ ಉಲ್ಲಂಘನೆ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಲಾಗುವುದು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ತಾಲೂಕು ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬುಧವಾರ ನಗರದಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿತ್ತು. ಪತ್ರಕರ್ತರಿಗೆ ಆಸನ ವ್ಯವಸ್ಥೆ ಇರಲಿಲ್ಲ. ಕಾರ್ಯಕ್ರಮ ನಡೆಯುವ ಸ್ಥಳದ ಹೊರಾಂಗಣದಲ್ಲಿ ಕೆಲವರು ಅಳವಡಿಸಿದ್ದ ಫ್ಲೆಕ್ಸ್, ಬೋರ್ಡ್‌ಗಳು ಶಿಷ್ಟಾಚಾರ ಉಲ್ಲಂಘಿಸುವಂತಿದ್ದವು. ಅಲ್ಲದೆ ಸರ್ಕಾರ ನಿಯಮಗಳ ಪ್ರಕಾರ ಕಾರ್ಯಕ್ರಮ ಆಯೋಜಿಸಿರಲಿಲ್ಲ ಎಂದು ದೂರಿದರು.

ಸಾಮಾನ್ಯವಾಗಿ ಸರ್ಕಾರಿ ಕಾರ್ಯಕ್ರಮದಲ್ಲಿ ಚುನಾಯಿತ ಜನಪ್ರತಿನಿಧಿಗಳು ವೇದಿಕೆಯಲ್ಲಿ ಆಸನ ವ್ಯವಸ್ಥೆ ಹಾಗೂ ಮಾತನಾಡಲು ಅವಕಾಶ ನೀಡುವುದು ಸಂಪ್ರದಾಯ. ಆದರೆ, ಜನಪ್ರತಿನಿಧಿ ಅಲ್ಲದ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರಿಗೆ ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡಿದ್ದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಇತ್ತೀಚೆಗೆ ನಗರದಲ್ಲಿ ನಡೆದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಉದ್ಘಾಟನೆ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ರಾಮಪ್ಪ ಅವರು ಕಾರ್ಯಕ್ರಮದ ವೇದಿಕೆ ಮೇಲೆ ಆಗಮಿಸಿ ಮಾತನಾಡಿದ್ದಕ್ಕೆ ಅವರದೆ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್ ಕಡೆಯವರು ಗದ್ದಲ ಎಬ್ಬಿಸಿದ್ದರು. ಈ ಗೊಂದಲದಿಂದಾಗಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಮುಂದಿನ ದಿನಗಳಲ್ಲಿ ಸರ್ಕಾರ ಶಿಷ್ಟಾಚಾರದಂತೆ ಕಾರ್ಯಕ್ರಮ ಮಾಡಲಾಗುವುದು ಎಂದು ಸ್ವಯಂ ನಿರ್ಣಯಿಸಿ ಇದೇ ಮಾದರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದರು. ಆದರೆ, ಬುಧವಾರ ನಡೆದ ಗೃಹಲಕ್ಷ್ಮಿ ಕಾರ್ಯಕ್ರಮದಲ್ಲಿ ಎಲ್ಲ ನಿಯಮ ಗಾಳಿಗೆ ತೂರಿ ತಮಗೆ ಇಷ್ಟ ಬಂದಂತೆ ನಡೆದು ಕೊಂಡಿರುವುದು ಸರಿಯಲ್ಲ. ಈ ಕುರಿತು ಕೂಡಲೇ ಜಿಲ್ಲಾಧಿಕಾರಿಗೆ ಲಿಖಿತ ದೂರನ್ನು ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net