

ಮಂಜುನಾಥ ಎಸ್. ಅಂಗಡಿ ಧಾರವಾಡ
ಕೃಷಿ ವಿಶ್ವವಿದ್ಯಾಲಯ ಒಂದೆಡೆ ಲಕ್ಷ ಲಕ್ಷ ರೈತರನ್ನು ಸೇರಿಸಿ ಕೃಷಿ ಮೇಳ ಮಾಡುತ್ತದೆ. ಮತ್ತೊಂದೆಡೆ ವಿಶ್ವವಿದ್ಯಾಲಯದ ಉನ್ನತ ಹುದ್ದೆಯಲ್ಲಿರುವ ಕೆಎಎಸ್ ಅಧಿಕಾರಿ ಜಯಲಕ್ಷ್ಮೀ ರಾಯಕೋಡ ಅವರನ್ನು ಕಡೆಗಣಿಸಿದೆ. ರಾಜ್ಯ ಸರ್ಕಾರ ಮತ್ತು ಕೃಷಿ ವಿಶ್ವವಿದ್ಯಾಲಯ ನಡುವಿನ ಆಡಳಿತಾತ್ಮಕ ಕೊಂಡಿಯಾಗಿರುವ ಕುಲಸಚಿವರಿಗೇ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದಿರುವುದು ಸೋಜಿಗದ ಸಂಗತಿ.
ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ಕುಲಪತಿ ಅಧ್ಯಕ್ಷರಾಗಿರುತ್ತಾರೆ. ಕೃಷಿ, ತೋಟಗಾರಿಕೆ ಮತ್ತು ಆರ್ಥಿಕ ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕೃಷಿ ವಿವಿ ಕುಲಸಚಿವರು ಹಾಗೂ ಇತರರು ಸದಸ್ಯರಾಗಿರುತ್ತಾರೆ. ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಪ್ರಕಟಿತ ಕರ್ನಾಟಕ ರಾಜ್ಯಪತ್ರದಲ್ಲೇ ಕುಲಸಚಿವರು ಸದಸ್ಯರಾಗಿರುತ್ತಾರೆ. ಆದಾಗ್ಯೂ ಕೃಷಿ ವಿವಿ ಆಡಳಿತಾಧಿಕಾರಿಗಳು ಕುಲಸಚಿವರ ಹೆಸರು ಕೈ ಬಿಟ್ಟು ಸಬೂಬು ಹೇಳುತ್ತಿದ್ದಾರೆ.
ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಹುದ್ದೆಗೆ ಬಹುತೇಕ ಪ್ರಾಧ್ಯಾಪಕ ವೃಂದದವರನ್ನೇ ನೇಮಿಸಲಾಗುತ್ತದೆ. ಕೆಲವೊಮ್ಮೆ ಕೆಎಎಸ್ ಅಧಿಕಾರಿಗಳನ್ನು ನೇಮಿಸಿದ ಉದಾಹರಣೆಗಳಿವೆ. ಈ ಹಿಂದೆ ಕುಲಸಚಿವರಾಗಿದ್ದ ಶಿವಾನಂದ ಕರಾಳೆ, ವಿನಾಯಕ ಪಾಲನಕರ ಅವರೂ ಇಲ್ಲಿನ ಆಡಳಿತ ವ್ಯವಸ್ಥೆಯಿಂದ ಕಡೆಗಣನೆಗೆ ಒಳಗಾದವರು. ಹಾಲಿ ಕುಲಸಚಿವರಾಗಿರುವ ಜಯಲಕ್ಷ್ಮೀ ರಾಯಕೋಡ ಸಹ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ.
ಆಮಂತ್ರಣ ಪತ್ರಿಕೆಯಲ್ಲಿ ಕುಲಸಚಿವರ ಹೆಸರು ಗಮನಕ್ಕೆ ಬಂದಾಗ ಕುಲಪತಿ ಡಾ. ಪಿ.ಎಲ್. ಪಾಟೀಲ ಅವರು ಮೇಳದ ಅಧ್ಯಕ್ಷ ಡಾ. ಎಸ್.ಎಸ್. ಅಂಗಡಿ ಮತ್ತು ಉಪಾಧ್ಯಕ್ಷ ಡಾ. ಬಿ.ಡಿ. ಬಿರಾದಾರ ಅವರಿಂದ ಸ್ಪಷ್ಟೀಕರಣ ಕೇಳಿದ್ದರು. ಆದರೆ, ಡಾ. ಅಂಗಡಿ ಕುಲಪತಿ ಮಾತಿಗೂ ಬೆಲೆ ಕೊಡದೆ ಹಿಂದೆ ನಡೆದ ಅಚಾತುರ್ಯವನ್ನೇ ಮುಂದುವರಿಸಿಕೊಂಡು ಹೋಗುವ ಕಾರಣ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೇಳದ ಉದ್ಘಾಟನಾ ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾದರೆ ಕುಲಸಚಿವರೇ ಹೊಣೆಯಾಗಬೇಕಾಗುತ್ತದೆ. ಕುಲಸಚಿವರು ಉದ್ಘಾಟನಾ ವೇದಿಕೆವರೆಗೆ ಹೋದರೂ ಆಹ್ವಾನವಿಲ್ಲದಿರುವುದರಿಂದ ವೇದಿಕೆ ಏರುವಂತಿಲ್ಲ. ಹೀಗಾಗಿ, ಹಿಂದೆ ಕುಲಸಚಿವರಾಗಿದ್ದ ಕೆಎಎಸ್ ಅಧಿಕಾರಿಗಳು ಮುಜುಗರಕ್ಕೊಳಗಾಗದೆ, ಸಾರ್ವಜನಿಕರಂತೆ ಕುಟುಂಬದೊಂದಿಗೆ ಕೃಷಿ ಮೇಳದಲ್ಲಿ ಸುತ್ತಾಡಿದ ನಿದರ್ಶನಗಳಿವೆ. ಹಿಂದಿನ ಪರಿಪಾಠವನ್ನೇ ಮುಂದುವರಿಸಿಕೊಂಡು ಹೋಗುತ್ತಿರುವ ಆಡಳಿತಾಧಿಕಾರಿಗಳು ಶಿವಮೊಗ್ಗ, ರಾಯಚೂರು ಕೃಷಿ ವಿಶ್ವವಿದ್ಯಾಲಯಗಳ ಕೃಷಿ ಮೇಳದ ಆಮಂತ್ರಣ ಪತ್ರಿಕೆ ನೋಡುವ ಗೋಜಿಗೆ ಹೋಗಿಲ್ಲ.
ಕೃಷಿ ಮೇಳದ ಆಮಂತ್ರಣ ಪತ್ರಿಕೆಯಲ್ಲಿ ಕುಲಸಚಿವರ ಹೆಸರು ಕಾಣಿಸದ ಆಡಳಿತಾಧಿಕಾರಿಗಳು, ಬೀಜ ಮೇಳ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಹೆಸರು ಪ್ರಕಟಿಸಿದೆ. ವ್ಯವಸ್ಥಾಪನಾ ಮಂಡಳಿ ಸದಸ್ಯರು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕೃಷಿ ಇಲಾಖೆ ಆಯುಕ್ತರು, ಜಲಾನಯನ ಇಲಾಖೆ ಆಯುಕ್ತರು ಮತ್ತು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷರು ಹಾಗೂ ಕೃಷಿ ವಿವಿ ಕುಲಸಚಿವೆ ಜಯಲಕ್ಷ್ಮೀ ರಾಯಕೋಡ ಅವರ ಹೆಸರು ಪ್ರಕಟಿಸಿ ಬೀಜ ಮೇಳದ ವಿಶೇಷ ಆಹ್ವಾನಿತರು ಎಂದು ಪ್ರಕಟಿಸಲಾಗಿದೆ.
ಆಮಂತ್ರಣ ಪತ್ರಿಕೆ ಮತ್ತು ಕಾರ್ಯಕ್ರಮಗಳಿಗೆ ಕುಲಸಚಿವರ ಹೆಸರನ್ನು ಕೈ ಬಿಟ್ಟಿರುವ ಕುರಿತು ಆಡಳಿತಾಧಿಕಾರಿಗಳು ಮತ್ತೊಂದು ಎಡವಟ್ಟು ಮಾಡಿದ್ದಾರೆ. ಕೃಷಿ ಮೇಳದ ಅಧ್ಯಕ್ಷ ಹಾಗೂ ವಿಸ್ತರಣಾ ನಿರ್ದೇಶಕರೂ ಆಗಿರುವ ಡಾ. ಎಸ್.ಎಸ್. ಅಂಗಡಿ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ‘ಕೃಷಿ ಮೇಳ ವೈಜ್ಞಾನಿಕವಾಗಿ ವಿಸ್ತರಣೆ, ಸಂಶೋಧನೆಗಳನ್ನು ಒಳಗೊಂಡ ರೈತರ ಕಾರ್ಯಕ್ರಮ. ಆದ್ದರಿಂದ ಆಮಂತ್ರಣ ಪತ್ರಿಕೆಯಲ್ಲಿ ಕುಲಸಚಿವರ ಹೆಸರು ನಮೂದಿಸಿಲ್ಲ. ಅಲ್ಲದೆ, ಹಿಂದಿನ ಕೃಷಿ ಮೇಳಗಳ ಆಮಂತ್ರಣ ಪತ್ರಿಕೆಗಳನ್ನು ಗಮನಿಸಿದಾಗ ಕುಲಸಚಿವರ ಹೆಸರು ಇಲ್ಲದಿರುವುದು ಕಂಡುಬಂದಿದೆ ಎಂದು ಡಾ. ಅಂಗಡಿ ಸಬೂಬು ನೀಡಿದ್ದಾರೆ.
ಕೃಷಿ ವಿಶ್ವವಿದ್ಯಾಲಯದಲ್ಲಿ ಶಿಷ್ಟಾಚಾರ ಇಲಾಖೆಯ ನಿಯಮಾವಳಿ ಉಲ್ಲಂಘನೆ ಹಲವು ವರ್ಷಗಳಿಂದ ಮುಂದುವರಿದಿದೆ. ಕುಲಸಚಿವರು, ಕೇಂದ್ರ ಸರ್ಕಾರದ ಐಸಿಎಆರ್ ಮಹಿಳಾ ಪ್ರತಿನಿಧಿಯ ಹೆಸರನ್ನೂ ಕಡೆಗಣಿಸಲಾಗಿದೆ. ನಾನೂ ರೈತನ ಮಗಳಾಗಿರುವುದರಿಂದ ರೈತರಿಗೆ ಸ್ಪೂರ್ತಿಯಾಗುವ ಸಾಧ್ಯತೆ ಇತ್ತು. ಆದರೂ ಬೇಜಾರಿಲ್ಲ. ಮುಂದೆ ಬರುವ ಕುಲಸಚಿವರಿಗಾದರೂ ಇಂಥ ಮುಜುಗರ ಆಗಬಾರದು. ಹೀಗಾಗಿ, ಶಿಷ್ಟಾಚಾರ ಉಲ್ಲಂಘನೆ ಕುರಿತು ರಾಜ್ಯಪಾಲರು ಮತ್ತು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಜಯಲಕ್ಷ್ಮೀ ರಾಯಕೋಡ, ಕೃಷಿ ವಿವಿ ಕುಲಸಚಿವೆ