ಶಿಷ್ಟಾಚಾರ ಉಲ್ಲಂಘನೆ: ಶಿಸ್ತು ಕ್ರಮಕ್ಕೆ ದೂರು

4adarshkdga2
Published on

ಮಡಿಕೇರಿ: ಸರ್ಕಾರದ ಸಹಭಾಗಿತ್ವದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರ ಜಿಲ್ಲಾಧಿಕಾರಿ ಬಿ.ಎನ್.ವೀಣಾರವರಿಗೆ ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾರವರು ಲಿಖಿತ ದೂರು ಸಲ್ಲಿಸಿದರು.


ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾಡಳಿತ ಹಾಗೂ ಮಡಿಕೇರಿ ನಗರ ಸಭೆಯ ಸಹಯೋಗದಲ್ಲಿ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಅ.೧೬ ರಿಂದ ಅ೨೪ರವರೆಗೆ ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ನಿರ್ಮಿಸಲಾದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದಿದೆ. ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಆದ್ಯತಾ ಸೂಚಿ ಪಟ್ಟಿ ಅನ್ವಯ ಶಿಷ್ಟಾಚಾರ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಆಹ್ವಾನ ಪತ್ರಿಕೆ ಮುದ್ರಿಸುವಾಗ ಆದ್ಯತೆ ಅನುಸಾರವಾಗಿ ಅತಿಥಿಗಳ ಗಣ್ಯರ ಹೆಸರನ್ನು ಕ್ರಮವಾಗಿ ನಮೂದಿಸುವುದು ನಿಯಮವಾಗಿದೆ.


ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಭಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಶಿಷ್ಟಾಚಾರ) ಹೊರಡಿಸಿರುವ ಆದೇಶದನ್ವಯ ಕರ್ನಾಟಕ ರಾಜ್ಯದ ಆದ್ಯತಾ ಸೂಚಿ ಪಟ್ಟಿಯ ಅನುಚ್ಛೇದ ೧೮ರ ಕ್ರಮದಲ್ಲಿ ಮುದ್ರಿತವಾಗಬೇಕಿತ್ತು. ಆದರೆ, ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು(ಸಂಪುಟ ದರ್ಜೆ) ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣರವರ ಹೆಸರನ್ನು ಆದ್ಯತಾ ಸೂಚಿ ಅನುಚ್ಛೇದ ೨೧ರ ಕ್ರಮದಲ್ಲಿ ಸಂಸದರಾದ ಪ್ರತಾಪ ಸಿಂಹರವರ ನಂತರ ನಮೂದಿಸಲಾಗಿದೆ. ಇದು ಸರ್ಕಾರದ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಮಡಿಕೇರಿ ನಗರ ಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net