ವಿಸ್ಟ್ರಾನ್ ಕಾರ್ಖಾನೆಯಲ್ಲಿ ದಾಂಧಲೆ ; 119 ಆರೋಪಿಗಳ ಸೆರೆ

IMG-20201213-WA0007
Published on

ಕೋಲಾರ: ನರಸಾಪುರದ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರು ನಡೆಸಿರುವ ದಾಂಧಲೆ ಪ್ರಕರಣ ಸಂಬಂಧ ಪೊಲೀಸರು 119 ಜನರನ್ನು ಬಂಧಿಸಿ ಕೋಲಾರ, ಕೆಜಿಎಫ್, ಚಿಂತಾಮಣಿ ಜೈಲಿಗೆ ಕಳುಹಿಸಿದ್ದಾರೆ. ಈ ನಡುವೆ ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂಬ ಆರೋಪ ಪಾಲಕರಿಂದ ವ್ಯಕ್ತವಾಗಿದೆ.

ದುಷ್ಕರ್ಮಿಗಳ ಬಂಧನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ರಚಿಸಿರುವ ತಂಡಗಳು ವಿಡಿಯೋ, ಸಿಸಿ ಕ್ಯಾಮರಾ ದೃಶ್ಯ ಹಾಗೂ ಫೋಟೋಗಳು ಹಾಗೂ ವಶಕ್ಕೆ ಪಡೆದಿರುವ ಕಾರ್ಮಿಕರ ಮಾಹಿತಿ ಆಧರಿಸಿ ಈವರೆಗೆ 119 ಜನರನ್ನು ಬಂಧಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಕಾರ್ಮಿಕರ ಚಹರೆ ಮೇರೆಗೆ ಪೊಲೀಸರು ಶನಿವಾರ ಸಂಜೆ ಕಾರ್ಮಿಕರ ಮನೆಗಳಿಗೆ ತೆರಳಿ ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಿದ್ದರು.

ಪಾಲಕರ ರೋಧನೆ: ನಗರ ಹೊರವಲಯದ ಟಮಕದಲ್ಲಿರುವ ಎಸ್ಪಿ ಕಚೇರಿ ಬಳಿ ನೂರಾರು ಕಾರ್ಮಿಕರ ಪಾಲಕರು ನಮ್ಮ ಮಕ್ಕಳು ಅಮಾಯಕರು, ಯಾರೋ ಕೆಲ ಕಿಡಿಗೇಡಿಗಳು ಮಾಡಿರುವ ಕೃತ್ಯಕ್ಕೆ ಎಲ್ಲರನ್ನೂ ಹೊಣೆ ಮಾಡಬೇಡಿ, ತಮ್ಮ ಮಕ್ಕಳನ್ನು ಜೈಲಿಗೆ ಕಳುಹಿಸಿ ಭವಿಷ್ಯಕ್ಕೆ ಮಸಿ ಬಳಿಯಬೇಡಿ ಎಂದು ಅವಲತ್ತುಕೊಂಡರು.

ಗುತ್ತಿಗೆದಾರರು ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು. ನಾವು ನಿಗದಿ ಮಾಡಿದಷ್ಟು ಸಂಬಳ ಪಡೆಯಬೇಕೆಂದು ಷರತ್ತು ಹಾಕಿದ್ದರು. ಈ ಕ್ರಮ ನಮಗೆ ಒಪ್ಪಿಗೆ ಆಗಲಿಲ್ಲ, ಕೆಲಸ ಬಿಡುವಂತೆ ನಾವೇ ಹೇಳಿದ್ದರಿಂದ ಕೆಲಸ ಬಿಟ್ಟು ಬೇರೆ ಕಡೆ ಕೆಲಸ ಹುಡುತ್ತಿದ್ದಾರೆ. ಆದರೂ ಕಂಪನಿಯವರು ನಮ್ಮ ಮಕ್ಕಳ ಮೇಲೆ ಸುಳ್ಳು ದೂರು ನೀಡಿದ್ದಾರೆ, ಮಕ್ಕಳ ಬಂಧನದಿಂದ ನಮಗೆ ಆತಂಕ ಹೆಚ್ಚಾಗಿದೆ, ದಯವಿಟ್ಟು ಬಿಟ್ಟು ಬಿಡಿ ಎಂದು ಅಂಗಲಾಚಿದರು. ಕಚೇರಿ ಬಳಿ ಗುಂಪು ಸೇರಿದ್ದ ಪಾಲಕರನ್ನು ಪೊಲೀಸರು ಚದುರಿಸಿದರಲ್ಲದೆ ನಿಮಗಿಂತಲೂ ಹೆಚ್ಚು ನಮಗೆ ಜವಾಬ್ದಾರಿ ಇದೆ. ಎಲ್ಲವನ್ನೂ ಪರಿಶೀಲಿಸಿ ಘಟನೆಯಲ್ಲಿ ಭಾಗಿಯಾದವರನ್ನಷ್ಟೇ ಬಂಧಿಸಲಾಗುತ್ತಿದೆ ಎಂದು ಸಮಾಧಾನಪಡಿಸಿದರು.

ಮಹಿಳೆ ಅಳಲು: ಮೂರು ದಿನದ ಹಿಂದೆ ರಜೆ ಹಾಕಿ ತಿರುಪತಿಗೆ ಹೋಗಿ ಬಂದಿದ್ದ ಮಗ ಶನಿವಾರ ಬೆಳಗ್ಗೆ ಕೆಲಸಕ್ಕೆ ಹೋಗಲು ಸಜ್ಜಾಗುತ್ತಿದ್ದಾಗ ಮನೆಗೆ ಬಂದ ಪೊಲೀಸರು ಜೀಪಿನಲ್ಲಿ ಹತ್ತಿಸಿಕೊಂಡು ಠಾಣೆಗೆ ಕರೆದೊಯ್ದು ಜೈಲಿಗೆ ಅಟ್ಟಿದ್ದಾರೆ. ನಿಜವಾದ ಆರೋಪಿಗಳನ್ನು ಬಂಧಿಸುವ ಬದಲು ನನ್ನ ಮಗನನ್ನು ಬಂಧಿಸಿರುವುದು ಯಾವ ನ್ಯಾಯ.

ನಾಗರತ್ನಮ್ಮ, ಕಾರ್ಮಿಕರ ಸಂಬಂಧಿ

ಪ್ರಚೋದನೆಗೆ ಬಲಿ: ಕಂಪನಿಯ ಮಹಿಳಾ ಕಾರ್ಮಿಕರೊಬ್ಬರು ಪ್ರಚೋದನೆಗೆ ಒಳಗಾಗಿ ಕಂಪನಿ ಆಸ್ತಿಗೆ ಹಾನಿ ಮಾಡಿರುವುದಕ್ಕೆ ಸಾಕ್ಷಿ ಲಭಿಸಿರುವುದರಿಂದ ಪೊಲೀಸರು ಆ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಘಟನೆ ಸಂದರ್ಭದಲ್ಲಿ ಸಹದ್ಯೋಗಿಯೊಬ್ಬ ಹೆಣ್ಣು ಮಕ್ಕಳು ಮಾಸ್ಕ್ ಹಾಕಿಕೊಂಡಿರುವುದರಿಂದ ಯಾರಿಗೂ ಗುರುತು ಸಿಗಲ್ಲ, ಕ್ಯಾಬಿನ್ ಒಡೆದು ಹಾಕಿ, ನಿಮಗೆ ಏನಾದರೂ ಆದರೆ ನಾವಿದ್ದೇವೆ ಎಂದರು. ಜತೆಗೆ ನಮ್ಮ ಮಾತು ಕೇಳದಿದ್ದರೆ ಸಂಬಳ ಸಿಗಲ್ಲ, ಕೆಲಸವೂ ಹೋಗುತ್ತದೆ ಎಂದು ಭಯ ಹುಟ್ಟಿಸಿದ್ದರಿಂದ ದೊಣ್ಣೆ ಹಿಡಿದೆ, ಆದರೆ ಕಂಪನಿಯ ಯಾವುದೇ ಆಸ್ತಿಯನ್ನು ನಾಶಪಡಿಸಿಲ್ಲ, ನಾನು ಅಮಾಯಕಳು ಎಂದು ಪೊಲೀಸರ ಮುಂದೆ ಕಣ್ಣಿರು ಹಾಕಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net