

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ವೈಶಿಷ್ಟೃವೊಂದು ಸೇರ್ಪಡೆಗೊಂಡಿದೆ. ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕ್ಷೇತ್ರದಲ್ಲಿರುವ ಮಂಜೂಷಾ ಕಾರು ಸಂಗ್ರಹಾಲಯದ ವಿಸ್ತರಿತ ಭಾಗವಾಗಿ ‘ಪಯಣ ಕಾರು ಸಂಗ್ರಹಾಲಯ’ ಮೈಸೂರಿನಲ್ಲಿ ನಿರ್ಮಾಣಗೊಂಡಿದೆ.
ನಗರದ ಹೊರವಲಯದ ಶ್ರೀರಂಗಪಟ್ಟಣ ಸಮೀಪ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಾಣ ಹಂತದಲ್ಲಿ ಯೇ ತನ್ನ ವಿಶಿಷ್ಟ ವಿನ್ಯಾಸದಿಂದಲೇ ಸ್ಥಳೀಯರು ಹಾಗೂ ಪ್ರವಾಸಿಗರ ಗಮನ ಸೆಳೆಯುತ್ತಿದ್ದ ‘ಪಯಣ’ ಏ.1 ರಂದು ಲೋಕಾರ್ಪಣೆ ಗೊಂಡಿದೆ.
ಜಗತ್ತು ಅದೆಷ್ಟೇ ವೇಗದಲ್ಲಿ ಬದಲಾಗುತ್ತಿದ್ದರೂ ವಿಂಟೇಜ್ ಕಾರುಗಳ ಆಕರ್ಷಣೆ ಕಡಿಮೆಯಾಗದು. ವಿಂಟೇಜ್ ವಾಹನಗಳು ಕೇವಲ ವಾಹನಗಳಾಗಿರದೆ, ಇತಿಹಾಸ, ಪರಂಪರೆಯ ಸಾಕ್ಷಿಗಳಾಗಿ, ರಾಯಭಾರಿಗಳಾಗಿ, ದಾಖಲೆಗಳಾಗಿ ನಿಲ್ಲುತ್ತವೆ. ಇಂತಹ ಅಮೂಲ್ಯ ಸೊತ್ತುಗಳ ಸಂಗ್ರಹವು ಧರ್ಮಸ್ಥಳದ ಮಂಜೂಷಾ ಕಾರು ಸಂಗ್ರಹಾಲಯದಲ್ಲಿವೆ. ಈಗ ಇದರದೇ ವಿಸ್ತರಿತ ಭಾಗ ಮೈಸೂರಿನಲ್ಲಿ ಸ್ಥಾಪನೆ ಯಾಗಿದೆ.
ಈ ಪಯಣ ಕಾರು ಸಂಗ್ರಹಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕಳೆದ 50 ವರ್ಷಗಳಿಂದ ಸಂಗ್ರಹಿಸಿರುವ ವಿಂಟೇಜ್ ಕಾರುಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಪ್ರತಿಯೊಂದು ಕಾರಿನ ಸಮಗ್ರ ಮಾಹಿತಿ ಮತ್ತು ಇತಿಹಾಸ ಅರಿಯಲು ಸುಲಭವಾಗುವಂತೆ ಅತ್ಯಂತ ಅಚ್ಚುಕಟ್ಟಾದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಕಾರುಗಳ ಜತೆಗೆ ಪಯಣದ ಧ್ಯೇಯವಾಕ್ಯ ‘ಗಾಡಿಯಿಂದ ಕಾರಿನೆಡೆಗೆ’ ಅನ್ನುವುದನ್ನು ನಿರೂಪಿಸುವಂತೆ ವಿವಿಧ ಗಾಡಿಗಳು, ದ್ವಿ-ಚಕ್ರ ವಾಹನಗಳು ಮತ್ತು ಸಾಂಸ್ಕೃತಿಕ ಪರಿಕರಗಳೂ ಇವೆ.
ಪಯಣದ ವೈಶಿಷ್ಟೃ: ವಾಹನದ ಚಕ್ರದ (ಟೈರ್) ಮಾದರಿಯ ವಿಭಿನ್ನ ವಿನ್ಯಾಸದಲ್ಲಿ ನಿರ್ಮಾಣಗೊಂಡಿರುವ ಪಯಣ ಸಂಗ್ರಹಾಲಯವು ಕಲಾತ್ಮಕ ನಗರಿ ಮೈಸೂರಿಗೆ ಆಕರ್ಷಕ ಮೆರುಗು ನೀಡಿರುವುದರ ಜತೆಗೆ ವಿನ್ಯಾಸದ ಕಾರಣದಿಂದ ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದೆ. ವಿಶಾಲವಾದ ಪ್ರದೇಶದಲ್ಲಿ ವಾಹನಗಳನ್ನು ಪ್ರದರ್ಶಿಸಿರುವುದರಿಂದ ಪ್ರತಿಯೊಂದು ವಾಹನದ ಬಗ್ಗೆಯೂ ಸಮಗ್ರವಾಗಿ ತಿಳಿದುಕೊಳ್ಳುವ ಅನುಕೂಲವಿದೆ.
ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಡಾ. ವೀರೇಂದ್ರ ಹೆಗ್ಗಡೆ ಅವರು ಪಯಣವನ್ನು ಕೇವಲ ಸಂಗ್ರಹಾಲಯವಾಗಿಸದೆ, ವಿಂಟೇಜ್ ಕಾರುಗಳ ಪ್ರದರ್ಶನ ತಾಣದ ಜತೆಗೆ ಶಾಲಾ ವಿದ್ಯಾರ್ಥಿಗಳಿಗೆ , ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ,ವಾಹನ ತಂತ್ರಜ್ಞಾನದ ಬೆಳವಣಿಗೆಯ ಬಗ್ಗೆ ಆಸಕ್ತಿ ಇರುವ ಎಲ್ಲರಿಗೂ ಇದು ಜ್ಞಾನದೇಗುಲವಾಗಿದೆ. ಯಾಕೆಂದರೆ ಇಲ್ಲಿ ಪ್ರದರ್ಶಿತ ಪ್ರತಿ ಕಾರುಗಳ ಸಮಗ್ರ ಮಾಹಿತಿಯು ಸಂದರ್ಶಕರಿಗೆ ಸ್ಥಳದಲ್ಲಿ ಲಭ್ಯವಿರಲಿದೆ. ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಪಯಣ ಆಟೋಮೊಬೈಲ್ ಕ್ಷೇತ್ರದ ಇತಿಹಾಸವನ್ನು ಜೀವಂತ ಮಾದರಿಗಳ ಮೂಲಕ ಒದಗಿಸಲಿದೆ.
ಪರಂಪರೆಯ ಕೊಂಡಿ: ಹಿರಿಯರು-ಕಿರಿಯರೆನ್ನದೆ ಎಲ್ಲ ವರ್ಗದವರನ್ನೂ ಆಕರ್ಷಿಸುವ ರೀತಿಯಲ್ಲಿ ಇಲ್ಲಿ ಅತಿ ಅಪರೂಪದ, ಐತಿಹಾಸಿಕ ಮಹತ್ವವುಳ್ಳ ಕಾರುಗಳನ್ನೂ ಪ್ರದರ್ಶಿಸಲಾಗಿದೆ. ಮೈಸೂರಿನ ಮಹಾರಾಜರು ಬಳಸುತ್ತಿದ್ದ ಕಾರು, ಸರ್. ಸಿ. ವಿ. ರಾಮನ್ ಉಪಯೋಗಿಸುತ್ತಿದ್ದ ಕಾರಿನಾದಿಯಾಗಿ ಇತಿಹಾಸದ ಅನೇಕ ಮಹತ್ವಪೂರ್ಣ ಘಟನೆಗಳನ್ನು ಜ್ಞಾಪಿಸುವ ಕಾರುಗಳ ಸಂಗ್ರಹ ಇಲ್ಲಿದೆ. ಒಂದಾನೊಂದು ಕಾಲದಲ್ಲಿ ಮುಂಬೈ ನಗರದ ಪ್ರಮುಖ ಆಕರ್ಷಣೆಯಾಗಿದ್ದು ಪ್ರಸ್ತುತ ಕಣ್ಮರೆಯಾಗಿರುವ ಡಬ್ಬಲ್ ಡೆಕ್ಕರ್ ಬಸ್‌ನ ಭವ್ಯ ಪರಂಪರೆಯನ್ನು ಬಿಂಬಿಸುವ ಬಸ್ ಕೂಡ ಇಲ್ಲಿವೆ. ಜಾಗತಿಕ ವಿಶ್ವ ಯುದ್ಧದ ಸಂದರ್ಭದಲ್ಲಿ ಉಪಯೋಗಿಸುತ್ತಿದ್ದ ಮಿಲಿಟರಿ ವಾಹನಗಳು, ಟ್ರಕ್ಕುಗಳಾದಿಯಾಗಿ ನಾವು ಇತಿಹಾಸದ ಪುಟಗಳಲ್ಲಿ ಓದಿ, ಕೇಳಿ ತಿಳಿದಿದ್ದ ಅಪರೂಪದ ವಾಹಗಳನ್ನು ಕಣ್ಣಾರೆ ನೋಡುವ ಅವಕಾಶ ಕಲ್ಪಿಸಿದೆ ಪಯಣ ಮ್ಯೂಸಿಯಂ.
ಇತಿಹಾಸದ ಜೀವಂತ ಸಾಕ್ಷಿ: ಅಟೋಮೋಟಿವ್ ಎಂಜಿನಿಯರಿಂಗ್‌ನ ಹುಟ್ಟು-ಬೆಳವಣಿಗೆ ಮತ್ತು ಪ್ರಸ್ತುತ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಿರುವುದು ಪಯಣವನ್ನು ಉಳಿದ ಸಂಗ್ರಹಾಲಯಗಳಿಗಿಂತ ಭಿನ್ನವಾಗಿ ನಿಲ್ಲುವಂತೆ ಮಾಡುತ್ತದೆ. ಇಲ್ಲಿ ವಿವಿಧ ಕಾಲಘಟ್ಟಗಳ ವೈವಿಧ್ಯಮಯ ಶ್ರೇಣಿಯ ಅಪರೂಪದ ವಾಹನಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಮಧ್ಯಕಾಲೀನ ಕ್ಲಾಸಿಕ್ ಕಾರುಗಳಿಂದ ಆರಂಭಿಸಿ 20 ನೇ ಶತಮಾನದ ಆರಂಭದ ಹಲವು ಅಪರೂಪದ ವಾಹನಗಳೂ ಇಲ್ಲಿವೆ.
ಪ್ರತಿಯೊಂದು ವಾಹನಗಳ ತಯಾರಕರ ಕಥೆ, ವಾಹನ ಉದ್ಯಮಗಳ ವಿಕಾಸದ ಹಾದಿಯಲ್ಲಿ ವಿವಿಧ ಕಂಪನಿಗಳು ನೀಡಿರುವ ಕೊಡುಗೆ ಇವೆಲ್ಲವುಗಳನ್ನು ಅರಿತುಕೊಳ್ಳುವುದು ಎಷ್ಟು ಮುಖ್ಯ ಅನ್ನುವುದನ್ನು ಪಯಣಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರೂ ಅರಿತುಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.
ಪಯಣದಲ್ಲಿ ಮತ್ತೇನಿದೆ?: ಇಲ್ಲಿರುವ ಕೆಲವು ವಿಶಿಷ್ಟ ಸೌಲಭ್ಯಗಳು ವಿಂಟೇಜ್ ಕಾರು ಮ್ಯೂಸಿಯಂ ಮಾತ್ರ ಆಗಬಹುದಾಗಿದ್ದ ಪಯಣಕ್ಕೆ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಪ್ರವಾಸಿ ತಾಣದ ಸ್ಥಾನಮಾನ ನೀಡಿವೆ. ಅತ್ಯಂತ ಸುಸಜ್ಜಿತ ರೀತಿಯಲ್ಲಿ ರೂಪಿತವಾಗಿರುವ ಬಯಲು ರಂಗ ಮಂದಿರ ಪಯಣವನ್ನು ಸಾಂಸ್ಕೃತಿಕ ಲೋಕಕ್ಕೆ ತೆರೆದಿಟ್ಟಿದೆ. ಸಂಗೀತ, ನಾಟಕ, ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ವಿವಿಧ ಸಭಾ ಕಾರ್ಯಕ್ರಮಗಳಿಗೂ ಅನುವಾಗುವಂತೆ ಇಲ್ಲಿನ ವೇದಿಕೆ ನಿರ್ಮಿತವಾಗಿದೆ. ಮುಂದೆ ಇದೇ ಕಾರಣಕ್ಕೆ ಪಯಣ ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಿಯೂ ಗುರುತಿಸಿಕೊಳ್ಳುವ ಅವಕಾಶವಿದೆ. ಪಯಣಕ್ಕೆ ಭೇಟಿ ನೀಡುವವರ ಹಸಿವನ್ನು ತಣಿಸುವ ಫುಡ್ ಕೋರ್ಟ್ ಮತ್ತು ಮಕ್ಕಳಿಗಾಗಿ ವಿವಿಧ ಸೌಲಭ್ಯಗಳೋಂದೊಡಗೂಡಿದ ಪ್ಲೇ ಏರಿಯಾ ಕೂಡ ಇಲ್ಲಿದೆ.
ಅರಮನೆ ನಗರಿ, ಸಾಂಸ್ಕೃತಿಕ ರಾಜಧಾನಿ ಮೈಸೂರು ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಪ್ರಾಚೀನ ದೇವಾಲಯಗಳು, ಮೃಗಾಲಯ, ಅರಮನೆಗಳು, ಪಾರಂಪರಿಕ ಕಟ್ಟಡಗಳು, ಅತ್ಯಾಧುನಿಕ ತಾರಾಲಯ, ರೈಲ್ವೆ ಮ್ಯೂಸಿಯಂ ಇತ್ಯಾದಿ ಸ್ಥಳಗಳ ಪಟ್ಟಿಗೆ ಇದೀಗ ವಿಂಟೇಜ್ ಕಾರುಗಳ ಸಮಗ್ರ ಮಾಹಿತಿ ತಿಳಿಯಲು ಅನುಕೂಲವಾಗುವಂತೆ ನಿರ್ಮಿಸಿರುವ ಪಯಣವೂ ಸೇರ್ಪಡೆಗೊಂಡಿದೆ.