

ಶಿವಮೊಗ್ಗ: ಚೆಕ್‌ಪೋಸ್ಟ್‌ಗಳನ್ನು ಹಾಕದಿರುವುದು ಸೇರಿ ಕರ್ತವ್ಯ ನಿರ್ಲಕ್ಷೃ ಆರೋಪದಲ್ಲಿ ವಿನೋಬನಗರ ಠಾಣೆ ಇನ್‌ಸ್ಪೆಕ್ಟರ್ ಚಂದ್ರಕಲಾ ಅವರನ್ನು ಅಮಾನತುಗೊಳಿಸಿ ದಾವಣಗೆರೆ ಪೂರ್ವ ವಲಯದ ಐಜಿಪಿ ರವಿಕಾಂತೇಗೌಡ ಆದೇಶಿಸಿದ್ದಾರೆ.
ಈ ಮೊದಲು ಹಲವು ವಿಷಯದಲ್ಲಿ ಚಂದ್ರಕಲಾ ಅವರ ಬಹಿರಂಗ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದ್ದವು. ನ್ಯಾಯಾಧೀಶರ ಬಗ್ಗೆಯೂ ಹಗುರವಾಗಿ ಮಾತನಾಡಿದ್ದರು. ನಾಲ್ಕು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರಿನ ಮೈದಾನ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಅವರು ನಗರದ ವಿವಿಧ ಠಾಣೆಗಳ ವ್ಯಾಪ್ತಿಯ ಇನ್‌ಸ್ಪೆಕ್ಟರ್‌ಗಳು ಮತ್ತು ಸಬ್ ಇನ್‌ಸ್ಪೆಕ್ಟರ್‌ಗಳ ಸಭೆ ಕರೆದಿದ್ದು ಸಕಾರಣ ನೀಡದೇ ಆ ಸಭೆಗೂ ಗೈರಾಗಿದ್ದರು ಎನ್ನಲಾಗಿದೆ.
ಕರ್ತವ್ಯದಲ್ಲಿ ನಿರ್ಲಕ್ಷೃತನ, ಅಶಿಸ್ತು, ಚೆಕ್‌ಪೋಸ್ಟ್‌ಗಳನ್ನು ಹಾಕದಿರುವ ಬಗ್ಗೆ ಚಂದ್ರಕಲಾ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಎಸ್‌ಪಿ ಮಿಥುನ್‌ಕುಮಾರ್ ಅವರು ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದ್ದರು. ಅದನ್ನು ಪರಿಶೀಲಿಸಿದ ಇನ್‌ಸ್ಪೆಕ್ಟರ್ ಚಂದ್ರಕಲಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಐಜಿಪಿ ರವಿಕಾಂತೇಗೌಡ ಅವರು ವಿಜಯವಾಣಿಗೆ ತಿಳಿಸಿದ್ದಾರೆ.