ವಿನಯ ಆತ್ಮಹತ್ಯೆ ನ್ಯಾಯಾಂಗ ತನಿಖೆಯಾಗಲಿ

Published on

ಕುಕನೂರು: ರಾಜ್ಯದಲ್ಲಿ ಪೊಲೀಸ್ ಇಲಾಖೆ ತನ್ನ ಕರ್ತವ್ಯ ಮರೆಯುತ್ತಿದ್ದು, ಕಾಂಗ್ರೆಸ್ ಸರ್ಕಾರ ದುರಾಡಳಿತ ನಡೆಸುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಬಿಜೆಪಿ ಕಾರ್ಯಕರ್ತ ವಿನಯ ಸೋಮಯ್ಯ ಅವರ ಸಾವೇ ಸಾಕ್ಷಿಯಾಗಿದೆ. ಕೊಡಗು ಸಮಸ್ಯೆ ಹಾಗೂ ಪರಿಹಾರ ಎಂಬ ವಾಟ್ಸಾ ್ಯಪ್ ಗ್ರೂಪ್‌ಗೆ ಅಡ್ಮಿನ್ ಆಗಿದ್ದ ಕಾರಣ ಒಂದಕ್ಕೆ ಪೋಸ್ಟ್ ಮಾಡಿದವರನ್ನು ಬಿಟ್ಟು ವಿನಯ್ ಸೋಮಯ್ಯ ಅವರನ್ನು ಪೊಲೀಸರು ಬಂಧಿಸಿ, ತನಿಖೆ ಮಾಡದೆ ಆತನ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ಶಾಸಕ ಪೊನ್ನಣ್ಣ ಅವರ ಕಿರುಕುಳವೇ ವಿನಯ್ ಸಾವಿಗೆ ಕಾರಣವಾಗಿದೆ. ರಾಜಕೀಯ ದ್ವೇಷದಿಂದ ಅವರ ಸಾವಾಗಿದೆ. ವಿನಯ ಸೋಮಯ್ಯ ಡೆತ್ ನೋಟ್‌ನಲ್ಲಿ ಸ್ಪಷ್ಟವಾಗಿ ಬರದಿಟ್ಟಿದ್ದಾರೆ. ಸರ್ಕಾರ ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಬೇಕು. ಯಾದಗಿರಿ ಜಿಲ್ಲೆಯ ಪಿಎಸ್‌ಐ ಆತ್ಮಹತ್ಯೆ ಪ್ರಕರಣಕ್ಕೆ ಇನ್ನೂ ಸಹ ನ್ಯಾಯ ಸಿಕ್ಕಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯವನ್ನು ಹೋರಾಟ ಮಾಡಿ ಜಿಲ್ಲೆಗೆ ತಂದಿದ್ದೇನೆ. ಗ್ಯಾರಂಟಿ ಯೋಜನೆ ನೆಪದಲ್ಲಿ ವಿವಿ ಮುಚ್ಚಬಾರದು. ಅನುದಾನದ ಕೊರತೆ ಹೇಳುವುದು ಸರಿಯಲ್ಲ. ಇದರಿಂದ ಶೈಕ್ಷಣಿಕ ಹಿನ್ನಡೆಯಾಗುತ್ತದೆ. ವಕ್ಫ್ ಮಸೂದೆ ಜಾರಿಗೆಯಿಂದ ಭೂ ಕಬಳಿಕೆ ತಡೆಗಟ್ಟುತ್ತದೆ. ಯತ್ನಾಳ ಅವರನ್ನು ಬಿಜೆಪಿ ಶಿಸ್ತಿನ ಸಲುವಾಗಿ ಉಚ್ಚಾಟನೆ ಮಾಡಿದೆ ಎಂದರು.

ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಸಿ.ಎಚ್.ಪೊಲೀಸ್ ಪಾಟೀಲ್, ಶರಣಪ್ಪ ಬಣ್ಣದಬಾವಿ, ವೀರಣ್ಣ ಹುಬ್ಬಳ್ಳಿ, ಬಸವನಗೌಡ ತೊಂಡಿಹಾಳ, ಶಂಭು ಜೋಳದ, ಶಿವಕುಮಾರ ನಾಗಲಾಪೂರಮಠ, ಕರಬಸಯ್ಯ ಬಿನ್ನಾಳ, ಪಪಂ ಸದಸ್ಯರಾದ ಬಾಲರಾಜ ಗಾಳಿ, ಮಲ್ಲಿಕಾರ್ಜುನ ಚೌದರಿ, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಕನಕಪ್ಪ ಬ್ಯಾಡರ, ವೀರೇಶ ಸಬರದ, ಬಸವರಾಜ ಹಾಳಕೇರಿ, ಮಹಾಂತೇಶ ಹೂಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net