

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಧಾರ್ಮಿಕ ಕಾರ್ಯಗಳಿಂದ ಜೀವನದಲ್ಲಿ ನೆಮ್ಮದಿ ಹಾಗೂ ಶಾಂತಿ ದೊರೆಯಲಿದೆ ಎಂದು ಸೋಂಪುರ ಗ್ರಾಪಂ ಅಧ್ಯಕ್ಷೆ ಪ್ರೇಮಾತೀರ್ಥಪ್ರಸಾದ್ ತಿಳಿಸಿದರು.
ಸೋಂಪುರ ಹೋಬಳಿಯ ಎಡೇಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಕಂಬದ ಹನುಮಂತಯ್ಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ, ಸಂಪ್ರೋಕ್ಷಣ ಪ್ರತಿಷ್ಠಾಪನೆ, ವಿಮಾನಗೋಪುರ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಸ್ಥಾನ ಜೀರ್ಣೋದ್ಧಾರ ಕಾರ್ಯಗಳಲ್ಲಿ ಎಲ್ಲರೂ ಒಗ್ಗೂಡುವುದರಿಂದ ಸ್ನೇಹ ಸೌಹಾರ್ದತೆ ಬೆಳೆದು ಸಂತೊಷ, ನೆಮ್ಮದಿ ಸಿಗುತ್ತದೆ. ಇದರಿಂದ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಮುಖಂಡ ಎಚ್.ಮರಿಯಪ್ಪಗೌಡ ಮಾತನಾಡಿ, ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಸಾಧಿಸಿದ್ದರೂ, ಧರ್ಮ, ದೇವರ ಮೇಲಿನ ಅಭಿಮಾನ, ನಂಬಿಕೆಗೇನೂ ಕಡಿಮೆ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿ ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಾಣ, ಜೀರ್ಣೀದ್ಧಾರ ಕಾರ್ಯಗಳು ನಡೆಯುತ್ತಲೇ ಇವೆ. ಸಂಸ್ಕೃತಿ, ಸಂಪ್ರದಾಯ ಪಾಲಿಸಿ, ಎಲ್ಲರೂ ಒಂದೆಡೆ ಸೇರಿ ಪ್ರತಿ ವರ್ಷ ಗ್ರಾಮದಲ್ಲಿ ಜಾತ್ರೆ, ಉತ್ಸವ ನಡೆಸಲಾಗುತ್ತಿದೆ ಎಂದರು.
ಸೋಂಪುರ ಗ್ರಾಪಂ ಮಾಜಿ ಅಧ್ಯಕ್ಷ ತೀರ್ಥಪ್ರಸಾದ್, ಶಿವಗಂಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ವೈ.ಎಸ್.ರೇಣುಕೇಶ್ ಎಸ್.ಶಶಿಧರ, ಅಕ್ಕಹೊನ್ನಮ್ಮ, ಪುಟ್ಟಗಂಗಯ್ಯ, ವೈರಮುಡಿಯಪ್ಪ, ಗಂಗರುದ್ರಯ್ಯ, ಹನುಮಯ್ಯ, ರಾಜಣ್ಣ, ವಿಜಯಕುಮಾರ್ ಎ.ಎನ್.ಪ್ರೀಯವರ್ಧನ್, ಎನ್.ನಾಗರಾಜು, ಜಿ.ಆರ್.ವಿನಯಕುಮಾರ್, ಗಂಗಾಧರಪ್ಪ, ಸಾವಿತ್ರಮ್ಮ, ಗಂಗರುದ್ರಮ್ಮ ಇದ್ದರು.