

ಮದ್ದೂರು: ನಗರಸಭೆಗೆ ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ನಗರಸಭೆಯ ಮುಂಭಾಗ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನಾ ರಾಜ್ಯ ಪತ್ರವನ್ನು ಸುಟ್ಟು ಪ್ರತಿಭಟನೆ ನಡೆಸಿದರು.
ರೈತ ನಾಯಕಿ ಸುನಂದಾ ಜಯರಾಮ್ ಮಾತನಾಡಿ, ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿಯನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಬಾರದು ಎಂದು ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲೂಕು ಕಚೇರಿ, ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಲಾಗಿತ್ತು. ಈ ಮಧ್ಯೆಯೂ ನಗರಸಭೆಗೆ ಸೇರ್ಪಡೆಗೊಳಿಸಲು ಶಾಸಕರು ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಆಕ್ಷೇಪಣಾ ಪತ್ರ ನೀಡಿದ್ದರೂ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಬೇಜವಾಬ್ದಾರಿ ತೋರಿದ್ದಾರೆ. ನಮ್ಮದು ಗ್ರಾಮಗಳ ಭಾರತವೇ ಹೊರತು ನಗರ ಭಾರತವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೆಜ್ಜಲಗೆರೆ ಗ್ರಾ.ಪಂಗೆ ವಾರ್ಷಿಕ ಒಳ್ಳೆಯ ಆದಾಯ ಬರುತ್ತಿದೆ. ಇಲ್ಲಿ ಮೂಲ ಸೌಕರ್ಯವೂ ಉತ್ತಮವಾಗಿದೆ. ಒಂದು ವೇಳೆ ನಮ್ಮ ಗ್ರಾಮ ನಗರಸಭೆಗೆ ಸೇರಿದರೆ ನರೇಗಾ ಕೆಲಸ ಕೈ ತಪ್ಪುವುದರ ಜತೆಗೆ ಆಸ್ತಿ ತೆರಿಗೆಗಳು ಹೆಚ್ಚಾಗುತ್ತವೆ ಎಂದರು.
ನಗರಸಭೆಗೆ ಸೇರಿಸುವ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗೊರವನಹಳ್ಳಿ ಪ್ರಸನ್ನ, ಗಜ್ಜಲಗೆರೆ ಬಿಜೆಪಿ ಮುಖಂಡ ಮಹೀಂದ್ರ, ರೈತ ಸಂಘದ ಮುಖಂಡ ಲಿಂಗಪ್ಪಾಜಿ, ಜಿಲ್ಲಾ ಉಪಾಧ್ಯಕ್ಷ ಶಂಕರ್, ಗ್ರಾ.ಪಂ ಮಾಜಿ ಅಧ್ಯಕ್ಷ ರವಿ ಇತರರು ಇದ್ದರು.