ಹಳ್ಳಿಗಳ ಅಂದಕ್ಕೆ ಮಸಿ ಬಳಿದ ಕಸ

01002
Published on

ಬೆಳಗಾವಿ: ಜಿಲ್ಲೆಯ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. ಹಳ್ಳಿಗಳ ರಸ್ತೆ ಬದಿ, ಖಾಲಿ ಪ್ರದೇಶಗಳಲ್ಲಿ ಹಾಕುತ್ತಿರುವ ಹಸಿ ತ್ಯಾಜ್ಯ, ಬಯಲು ಶೌಚಗಳಿಂದ ಗ್ರಾಮೀಣ ಭಾಗ ಸಮಸ್ಯೆ ಎದುರಿಸುತ್ತಿವೆ. ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.

ಜಿಲ್ಲೆಯ 160ಕ್ಕೂ ಅಧಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿತ್ಯವೂ ಅಧಿಕ ಪ್ರಮಾಣ ವ್ಯಾಪಾರ ವಹಿವಾಟು, ಸಂತೆಗಳು ನಡೆಯುತ್ತಿವೆ. ಹಸಿ ತ್ಯಾಜ್ಯ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ರಸ್ತೆಯ ಬದಿಯಲ್ಲೇ ಹಾಕುತ್ತಿದ್ದಾರೆ. ಇದರಿಂದಾಗಿ ಹಳ್ಳಿಗಳು ಗಬ್ಬೆದ್ದು ನಾರುತ್ತಿವೆ. ಇದಲ್ಲದೆ, ತ್ಯಾಜ್ಯಗಳು ಜಲಮೂಲಗಳನ್ನು ಸೇರುತ್ತಿರುವುದರಿಂದ ನೀರು ಮಲಿನಗೊಂಡು ದುರ್ವಾಸನೆ ಬೀರುತ್ತಿದ್ದು, ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಸರ್ಕಾರವು ವಾರ್ಷಿಕವಾಗಿ ಕೋಟ್ಯಂತರ ರೂ. ಅನುದಾನ ಸ್ವಚ್ಛತೆಗೆ ವೆಚ್ಚ ಮಾಡುತ್ತಿದೆ. ಆದರೂ ಗ್ರಾಮೀಣ ಪ್ರದೇಶಗಳು ಗಬ್ಬೆದ್ದು ನಾರುತ್ತಿವೆ. ಅಲ್ಲದೆ, ಕೆಲ ಮಾಂಸ ಮಾರಾಟಗಾರರು, ತರಕಾರಿ ಮಾರಾಟಗಾರರು, ದೊಡ್ಡ ದೊಡ್ಡ ಹೋಟೆಲ್, ಅಂಗಡಿಕಾರರು, ರಸ್ತೆಯ ಬದಿ ವ್ಯಾಪಾರಿಗಳು ಪ್ರತಿನಿತ್ಯ ತಾಜ್ಯವನ್ನು ರಸ್ತೆಯ ಬದಿಯಲ್ಲಿಯೇ ಹಾಕುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ರಸ್ತೆಯ ಎರಡೂ ಬದಿಗಳು ಅಲ್ಲಲ್ಲಿ ಕಸದ ತೊಟ್ಟಿಯಾಗಿ ರೂಪ ಪಡೆದುಕೊಂಡಿವೆ.

ಬಯಲು ಶೌಚವೇ ಗತಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬ್ಯಾಂಕ್, ವ್ಯಾಪಾರ ವಹಿವಾಟು, ವಾರದ ಸಂತೆಗಳು ನಡೆಯುತ್ತಿವೆ. ಆದರೂ ಸಾರ್ವಜನಿಕರಿಗೆ ಸೂಕ್ತವಾದ ಶೌಚಗೃಹದ ವ್ಯವಸ್ಥೆ ಇಲ್ಲ. ಕೆಲಸದ ನಿಮಿತ್ತ ಪರ ಊರುಗಳಿಂದ ಬರುವ ಜನರು ಮೂತ್ರ ವಿಸರ್ಜನೆ, ಶೌಚಕ್ಕಾಗಿ ಖಾಲಿ ನಿವೇಶನ, ಬಯಲು ಪ್ರದೇಶ, ಕಟ್ಟಡಗಳ ಗೋಡೆಗಳನ್ನು ಅವಲಂಬಿಸಿದ್ದಾರೆ. ಕೆಲವು ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚಗೃಹಗಳು ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿವೆ.

ಗ್ರಾಮಸ್ಥರ ಅಸಮಾಧಾನ: ಗ್ರಾಮೀಣ ಪ್ರದೇಶ ಅಸ್ವಚ್ಛತೆಯಿಂದ ಬಳಲುತ್ತಿದೆ. ಇದನ್ನು ಕಂಡೂ ಸ್ಥಳೀಯ ಆಡಳಿತ ಸಂಸ್ಥೆಗಳು ಕೈಕಟ್ಟಿ ಕುಳಿತುಕೊಂಡಿವೆ. ಕಸ ಸುರಿಯುವವರಿಗೆ ಸೂಚನೆ ನೀಡುವಂತೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಕುಲಗೋಡ, ಯರಗಟ್ಟಿ, ಕೌಜಲಗಿ, ಯಾದವಾಡ, ಚಂದರಗಿ, ಕಡಕೋಳ, ನೇಸರಗಿ, ಮಮದಾಪುರ, ಹುಲಕುಂದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಗಳಿಗೆ ಆದಾಯ ಶೂನ್ಯ..?

ಮೂಡಲಗಿ ತಾಲೂಕಿನ ಕೌಜಲಗಿ, ಯಾದವಾಡ, ಕುಲಗೋಡ, ರಾಮದುರ್ಗ ತಾಲೂಕಿನ ಕಡಕೋಳ, ಸವದತ್ತಿ ತಾಲೂಕಿನ ಯರಗಟ್ಟಿ, ಬೈಲಹೊಂಗಲ ತಾಲೂಕಿನ ನೇಸರಗಿ ಸೇರಿ ವಿವಿಧ ತಾಲೂಕು ವ್ಯಾಪ್ತಿಯ 100ಕ್ಕೂ ಅಧಿಕ ಗ್ರಾಪಂ ವ್ಯಾಪ್ತಿಯಲ್ಲಿ ಮದ್ಯ, ಮಾಂಸದ ಅಂಗಡಿಗಳು, ಹೋಟೆ, ಸಣ್ಣ ಮತ್ತು ಅತಿ ಸಣ್ಣ ಗುಡಿ ಕೈಗಾರಿಕೆಗಳು, ವಾರದ ಸಂತೆಗಳು ನಡೆಯುತ್ತಿವೆ. ಮಾಸಿಕ ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ. ಆದರೆ, ಗ್ರಾಪಂಗಳಿಗೆ ಆದಾಯ ಮಾತ್ರ ಶೂನ್ಯವಾಗಿದೆ. ಆದಾಯಕ್ಕೆ ತಕ್ಕಂತೆ ತೆರಿಗೆ ವಸೂಲಿ ಆಗುತ್ತಿಲ್ಲ. ಷರತ್ತು ಇಲ್ಲದೆ ಅಂಗಡಿಗಳಿಗೆ ಪರವಾನಗಿ ನೀಡುತ್ತಿರುವ ಪರಿಣಾಮ ಸರ್ಕಾರಕ್ಕೆ ಲಕ್ಷಾಂತರ ರೂ. ತೆರಿಗೆ ನಷ್ಟವಾಗುತ್ತಿದೆ ಎಂದು ಹೋರಾಟಗಾರ ರಾಮು ಎಸ್.ಪಾಟೀಲ, ಫಕೀರ ಎಂ. ಮಾದರ ದೂರಿದ್ದಾರೆ.

ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ರಸ್ತೆಗಳ ಬದಿಯಲ್ಲಿ ತ್ಯಾಜ್ಯ ಹಾಕುತ್ತಿರುವ ಅಂಗಡಿಕಾರರಿಗೆ ನೋಟಿಸ್ ನೀಡುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗುತ್ತಿದೆ. ಈ ವಿಷಯದಲ್ಲಿ ನಿರ್ಲಕ್ಷೃ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.| ಎಸ್.ಬಿ.ಮುಳ್ಳಳ್ಳಿ ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ)

| ಮಂಜುನಾಥ ಕೋಳಿಗುಡ್ಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net