

ದೇವದುರ್ಗ: ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಅವರ ತತ್ವದಂತೆ ತಾಲೂಕಿನ ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ತಾಲೂಕಿನ ಮಸರಕಲ್ ಗ್ರಾಮದಲ್ಲಿ ಎರಡು ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಗುರುವಾರ ಮಾತನಾಡಿದರು. ಮಸರಕಲ್ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ 1.80 ಕೋಟಿ ರೂ., ಪಿಎಚ್‌ಸಿಯಲ್ಲಿ ಶವಾಗಾರ ನಿರ್ಮಾಣಕ್ಕೆ 20ಲಕ್ಷ ರೂ., ಸರ್ಕಾರಿ ಶಾಲೆ ಕಾಂಪೌಂಡ್ ನಿರ್ಮಾಣಕ್ಕೆ 50ಲಕ್ಷರೂ. ಹಾಗೂ ಜನರಿಗೆ ವಿದ್ಯುತ್ ಸೇವೆ ಸುಧಾರಿಸಲು 19ಕೋಟಿ ರೂ.ಅನುದಾನ ನೀಡಲಾಗಿದೆ.
110/33ಕೆವಿ ಉಪಕೇಂದ್ರ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ತಾಲೂಕಿನ ಪ್ರತಿ ಹಳ್ಳಿಗೂ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ. ಗ್ರಾಮಸ್ಥರು ಗುಣಮಟ್ಟದ ಕಾಮಗಾರಿ ನಿರ್ವಹಿಸಿಕೊಳ್ಳಲು ಮುಂದಾಗಬೇಕು ಎಂದರು. ಮುಖಂಡರಾದ ಶರಣಗೌಡ, ನಾಗರಾಜ ಪಾಟೀಲ್, ಚನ್ನಪ್ಪ ಮಸೀದಪುರ, ಸಿದ್ದಣ್ಣ ಗಣೇಕಲ್, ಶರಣಗೌಡ ಸುಂಕೇಶ್ವರಹಾಳ ಇತರರಿದ್ದರು.