

ನಂಜನಗೂಡು: ಗ್ರಾಮಾಂತರದ ಜನತೆ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಗ್ರಾಮಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ದೇವರಾಯ ಶೆಟ್ಟಿಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸಿದ್ದಪ್ಪಾಜಿ ದೇವಾಲಯ ಮತ್ತು ಧಾರ್ಮಿಕ ಸಭೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಸಂಪನ್ಮೂಲಗಳು ಲಭ್ಯವಿದೆ. ಆದರೆ ಒಗ್ಗಟ್ಟಿನಲ್ಲಿ ಕೊರತೆಯಿಂದಾಗಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಅಭಿವೃದ್ಧಿ ಸಾಧ್ಯ. ದೇವಸ್ಥಾನಗಳು ಜನರ ಭಕ್ತಿ-ಭಾವಗಳಿಗೆ ಹಿಡಿದ ಕನ್ನಡಿಯಾಗಿದ್ದು, ಗ್ರಾಮಸ್ಥರ ಸಹಕಾರದಿಂದ ಸಿದ್ದಪ್ಪಾಜಿ ದೇವಸ್ಥಾನ ನಿರ್ಮಾಣವಾಗಿರುವುದು ಇಲ್ಲಿನ ಜನರ ಮನಸ್ಸಿಗೆ ನೆಮ್ಮದಿ ತರಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ನಾನು ಪರಿಷತ್ ಸದಸ್ಯನಾಗುವ ಮೊದಲು ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೆ. ನಿವೃತ್ತಿ ನಂತರದಲ್ಲಿ ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬರಬೇಕಾಯಿತು. ಹಿಂದುಳಿದ ಕುಟುಂಬಗಳಿಗೆ ಶಿಕ್ಷಣ ದೊಡ್ಡ ಅಸ್ತ್ರವಾಗಿರುವುದರಿಂದ ಬೇರೆಯವರ ಸ್ವಾಧೀನದಿಂದ ಹೊರಬಂದು ಸ್ವಂತ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅಗತ್ಯ ಎಂದರು.
ದೇವಾಲಯ ನಿರ್ಮಾಣ ಮಾಡಲು ಭೂಮಿ ದಾನ ಮಾಡಿದ ದಾನಿ ಪಟೇಲ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಕಾಗುಂಡಿ ಮಠದ ಶ್ರೀ ಹರಳಯ್ಯ ರುದ್ರಸ್ವಾಮೀಜಿ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ದೇವರಾಯಶೆಟ್ಟಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಸುರೇಶ್, ಕಾಂಗ್ರೆಸ್ ಮುಖಂಡ ಸಿದ್ದರಾಜು, ಗ್ರಾಮದ ಮುಖಂಡರಾದ ಶಿವರಾಜಪ್ಪ, ನಾಗಣಪುರ ಶಿವನಾಗಪ್ಪ, ಬಿ ಟಿ ಕುಮಾರ್, ಸಿದ್ದರಾಜುಗೌಡ, ಲಿಂಗರಾಜು, ಎಡತೊರೆ ಕಡಜಟ್ಟಿ ಮಹೇಶ್, ಸುರೇಶ್ ಹೊಸವೀಡು, ದೇವಿರಮ್ಮ ಇತರರಿದ್ದರು.