ಚಿತ್ರನಗರಿಯಿಂದ ಗ್ರಾಮಸ್ಥರಿಗೆ ಆತಂಕ

ಚಿತ್ರನಗರಿಯಿಂದ ಗ್ರಾಮಸ್ಥರಿಗೆ ಆತಂಕ
Published on

ಕೋಣನೂರು ಲೋಕೇಶ್ ನಂಜನಗೂಡು

ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ಬಳಿ ಚಿತ್ರನಗರಿ ನಿರ್ಮಾಣಕ್ಕೆ ನೂರಾರು ಎಕರೆ ಭೂಮಿಯನ್ನು ಸರ್ಕಾರ ಹಾಗೂ ಕೆಐಎಡಿಬಿ ಅಧಿಕಾರಿಗಳು ಭೂಸ್ವಾಧೀನ ಮಾಡಿಕೊಂಡಿದೆ. ಆದರೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಇಮ್ಮಾವು, ಇಮ್ಮಾವು ಹುಂಡಿ ರೈತರು ಹಾಗೂ ಸಾಬರಹುಂಡಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

2020-21ರ ಬಜೆಟ್‌ನಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ಸರ್ಕಾರ ಘೋಷಣೆ ಮಾಡಿತು. ಮೊದಲ ಹಂತದಲ್ಲಿ 110 ಎಕರೆ ಪ್ರದೇಶವನ್ನು ಗುರುತು ಮಾಡಿತು. 2022-23ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಂದುವರೆದು ಸುತ್ತಲಿನ ಪ್ರದೇಶವನ್ನು ಸಹ ಭೂಸ್ವಾಧೀನ ಮಾಡಿಕೊಳ್ಳಲು ತಯಾರಿ ಮಾಡಿಕೊಳ್ಳಲಾಯಿತು. ಸಾಗುವಳಿ ಮಾಡುತ್ತಿದ್ದ ರೈತರ ಸಾವಿರಾರು ಎಕರೆ ಪ್ರದೇಶ ಕೂಡ ಇದರ ವ್ಯಾಪ್ತಿಗೆ ಒಳಪಟ್ಟಿದೆ ಎನ್ನಲಾಗಿದೆ.

ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದ ಚಿತ್ರನಗರಿ ಪಕ್ಕದಲ್ಲಿರುವ ಸಾಬರಹುಂಡಿ ಗ್ರಾಮಸ್ಥರಿಗೆ ಆತಂಕ ಪ್ರಾರಂಭವಾಗಿದೆ. ಉದ್ದೇಶಿತ ಚಿತ್ರನಗರಿ ನಿರ್ಮಾಣ ನಿಗದಿಪಡಿಸಿರುವ ಸನಿಹದಲ್ಲೇ ಸಾಬರಹುಂಡಿ ಗ್ರಾಮವಿದೆ. ಸಾಬರಹುಂಡಿ ಗ್ರಾಮ ಇರುವ ಬಗ್ಗೆ ಆಧಾರ್ ಕಾರ್ಡ್, ಗುರುತಿನ ಚೀಟಿ, ರೇಷನ್ ಕಾರ್ಡ್, ಮನೆಗಳು ಸಹ ಇವೆ. ಆದರೆ, ಈ ಗ್ರಾಮ ಇರುವ ಬಗ್ಗೆ ಸಮೀಪದ ಹುಳಿಮಾವು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಸುಮಾರು ಹತ್ತಕ್ಕೂ ಹೆಚ್ಚು ಕುಟುಂಬದ ನೂರಾರು ಬಡ ಮುಸ್ಲಿಮರು ಪೂರ್ವಜರ ಕಾಲದಿಂದಲೂ ಇದೇ ಜಾಗದಲ್ಲಿ ವ್ಯವಸಾಯ ಹಾಗೂ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಜಮೀನಿಗೆ ಸಂಬಂಧಿಸಿದ ಪಹಣಿಗಳಲ್ಲಿ ಗ್ರಾಮಸ್ಥರ ಹೆಸರು ನಾಪತ್ತೆಯಾಗಿ ಭೂಸ್ವಾಧೀನ ಪ್ರಕ್ರಿಯೆ ಎಂದು ಬದಲಾಗಿದ್ದು ಇವರ ಗಮನಕ್ಕೂ ಕೂಡ ಬಂದಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಬಳಿಕ ಇವರನ್ನ ಚಿಂತೆಗೀಡು ಮಾಡಿಬಿಟ್ಟಿದೆ. ಅದರಲ್ಲೂ ಈಗ ಚಿತ್ರನಗರಿ ಕಾಮಗಾರಿ ಪ್ರಗತಿಯಲ್ಲಿದೆ. ಕಾಂಪೌಂಡ್ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಸಾಬರಹುಂಡಿ ಗ್ರಾಮಸ್ಥರಿಗೆ ಸೇರಿದ ಸುಮಾರು 53 ಎಕರೆ ಜಮೀನು ನಮಗೆ ಸೇರಬೇಕು. ಅಧಿಕಾರಿಗಳು ಪ್ರಸ್ತುತ ಉಳುಮೆ ಮಾಡಲು ಸಹ ಬಿಡುತ್ತಿಲ್ಲ. ಜತೆಗೆ ರಾತ್ರೋರಾತ್ರಿ ನುಗ್ಗಿ ಜೆಸಿಬಿ ಮೂಲಕ ಮನೆಗಳನ್ನು ಧ್ವಂಸ ಮಾಡುತ್ತಾರೆ. ಕೇಳಲು ಹೋದರೆ ಮಕ್ಕಳು, ವೃದ್ಧರು ಎನ್ನದೆ ಹಲ್ಲೆ ಮಾಡುತ್ತಾರೆ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ನಿರಂತರ ರೈತರ ಪ್ರತಿಭಟನೆ: ಚಿತ್ರನಗರಿ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುತ್ತಿದ್ದಂತೆ ಸಮೀಪದ ಇಮ್ಮಾವು ಸೇರಿದಂತೆ ಸುತ್ತಮುತ್ತಲಿನ ರೈತರು ಕಳೆದ 50 ದಿನಗಳಿಂದ ಅನಿರ್ದಿಷ್ಟ ಪ್ರತಿಭಟನೆ ಮಾಡುತ್ತಿದ್ದಾರೆ. ಪೂರ್ವಜರ ಕಾಲದಿಂದಲೂ ಸಾಗುವಳಿ ಮಾಡುತ್ತಿದ್ದ ಮೂಲ ರೈತರಿಗೆ ಪರಿಹಾರ ಹಣ ನೀಡದೆ ದೂರದ ಗ್ರಾಮಗಳ ಬೇರೆ ಯಾರೋ ಅನಾಮಿಕರಿಗೆ ಸರ್ಕಾರದಿಂದ ಬಿಡುಗಡೆಯಾಗಿದ್ದ 18 ಕೋಟಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಇಮ್ಮಾವು ಮತ್ತು ಸುತ್ತಮುತ್ತಲಿನ ಒಬ್ಬರೇ ಒಬ್ಬರು ಮೂಲ ರೈತರಿಗೆ ಪರಿಹಾರದ ಹಣ ಜಮಾ ಆಗದಿರುವುದು ರೈತರ ಅನುಮಾನಕ್ಕೆ ಕಾರಣವಾಗಿ, ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಹಾಗೂ ನಂಜನಗೂಡಿನ ತಾಲೂಕು ಕಚೇರಿ ಬಳಿ ಹಲವಾರು ಬಾರಿ ಪ್ರತಿಭಟನೆ ನಡೆಸಿ 18 ಕೋಟಿ ರೂ.ಗೆ ಸಂಬಂಧಿಸಿದ ದಾಖಲಾತಿಗಳನ್ನು ನೀಡುವಂತೆ ಒತ್ತಾಯಿಸಿದರೂ ನೀಡಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದ್ದು, 18 ಕೋಟಿ ರೂ.ಗಳನ್ನು ಲಪಟಾಯಿಸಿದ್ದಾರೆ ಎಂದು ದೂರಿದ್ದಾರೆ.

ಒಟ್ಟಿನಲ್ಲಿ ದಶಕಗಳಿಂದ ಮೈಸೂರಿನಲ್ಲಿ ಚಿತ್ರ ನಗರಿ ನಿರ್ಮಾಣ ಆಗಬೇಕು ಎಂಬುದು ಸಿನಿಮಾ ರಂಗದವರ ಬೇಡಿಕೆಯಾಗಿದೆ. ಆದರೆ ಏನು ಅರಿಯದ ಮೂಲ ಸಾಗುವಳಿ ಮಾಡುತ್ತಿದ್ದ ರೈತರ ಜಮೀನುಗಳು ಹಾಗೂ ಪಕ್ಕದಲ್ಲಿ ಇರುವ ಸಾಬರಹುಂಡಿ ಗ್ರಾಮಸ್ಥರನ್ನು ಕೂಡ ಹೊರಹಾಕುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಈ ಸಂಬಂಧ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಸರಿಯಾದ ದಾಖಲಾತಿಗಳನ್ನು ಪರಿಶೀಲನೆ ಮಾಡದೆ ಹಾಗೂ ಸೂಕ್ತ ಪರಿಹಾರವನ್ನು ಸಹ ನೀಡದೆ ಏಕಾಏಕಿ ಕಾಮಗಾರಿಗೆ ಚಾಲನೆ ನೀಡಿರುವುದು ರೈತರು ಮತ್ತು ಗ್ರಾಮಸ್ಥರನ್ನು ನಿದ್ದೆಗೆಡಿಸುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net