

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ತಾಲೂಕು ಆಡಳಿತದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಸಬಾ ಹೋಬಳಿಯ 1 ಮತ್ತು 2ರ ಜನಸ್ಪಂದನಾ ಸಭೆ ಸಾರ್ವಜನಿಕರ ಅಹವಾಲುಗಳಿಲ್ಲದೆ ಕೇವಲ ಅಧಿಕಾರಿಗಳು ಮತ್ತು ರಾಜಕಾರಣಿಗಳ ವೇದಿಕೆಯಾಗಿ ಮಾರ್ಪಟ್ಟಿತ್ತು.
ಬೆಳಗ್ಗೆ 11 ಗಂಟೆಗೆ ಆರಂಭವಾದ ಸಭೆಯೂ ಕೇವಲ ವೇದಿಕೆಯಲ್ಲಿದ್ದ ಅಧಿಕಾರಿಗಳು ಜನಪ್ರತಿನಿಧಿಗಳ ಭಾಷಣಕ್ಕೆ ಮುಕ್ತಾಯವಾಯಿತು. ಇದೇ ವೇಳೆ ಕಾರ್ಮಿಕ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಇಲಾಖಾ ಕಿಟ್‌ಗಳನ್ನ ನೀಡಲಾಯಿತು.
ಬಳಿಕ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ಕಸಬಾ ಹೋಬಳಿಯ ಅಭಿವೃದ್ಧಿಯೂ ನಗರಕ್ಕೆ ತಕ್ಕಂತೆ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಕಸಬಾ ಹೋಬಳಿಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಕಸಬಾದಲ್ಲಿ ಒಟ್ಟು 7 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿಯೊಂದು ಪಂಚಾಯತಿಯಲ್ಲಿನ ಆಗುಹೋಗುಗಳನ್ನ ಗಮನದಲ್ಲಿಟ್ಟುಕೊಂಡು ಕೆಲಸ ಕಾರ್ಯಗಳನ್ನ ಮಾಡಲಾಗುತ್ತಿದೆ. ನಗರ ಭಾಗದಲ್ಲಿ ಜಿಲ್ಲಾಸ್ಪತ್ರೆ ಮತ್ತು ರಕ್ತನಿಧಿ ಸ್ಥಾಪಿಸಲಾಗುವುದು. ಕಾರ್ಮಿಕ ಇಲಾಖೆ ವತಿಯಿಂದ ಅರ್ಹ ಕಾರ್ಮಿಕರನ್ನ ಗುರುತಿಸಿ ಸೌಕರ್ಯಗಳನ್ನ ನೀಡಲಾಗುವುದು ಎಂದರು.
ಮದ್ಯ ಮುಕ್ತ ಗ್ರಾಮಕ್ಕೆ ಚಾಲನೆ: ತಾಲೂಕಿನಾದ್ಯಂತ ಮದ್ಯ ಅಕ್ರಮ ಮಾರಟಕ್ಕೆ ತಡೆಹಾಕುವ ಕುರಿತು ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಕಾನೂನು ಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಕಸಬಾ ಹೋಬಳಿಯ ದರ್ಗಾ ಜೋಗಿಹಳ್ಳಿಯಿಂದ ಅಭಿಯಾನ ಆರಂಭವಾಗಿದೆ ಎಂದು ಶಾಸಕರು ತಿಳಿಸಿದರು. ಅಬಕಾರಿ ಮತ್ತು ಪೊಲೀಸ್ ಇಲಾಖೆ ಜತೆ ಸಾರ್ವಜನಿಕರು ಕೈಜೋಡಿಸಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಕಾನೂನಡಿ ಕ್ರಮ ಜರುಗಿಸಲಾಗುವುದು. ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ಕೇವಲ ಅನುಮತಿ ಹೊಂದಿದ ಬಾರ್ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಇದೆ ಎಂದರು.
ಸಭೆಯಲ್ಲಿ ಸಾರ್ವಜನಿಕರೇ ಇಲ್ಲ!
ಬೆಳ್ಳಂಬೆಳಗ್ಗೆ ನಿರಂತರವಾಗಿ ಸುರಿಯುತ್ತಿದ್ದ ಮಳೆ ಮತ್ತು ಪ್ರಚಾರದ ಕೊರತೆಯಿಂದಾಗಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಅಹವಾಲು ಸಭೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ರಾಜಕಾರಣಿಗಳು ಹೊರತುಪಡಿಸಿದರೆ ಬೆರಳಣಿಕೆಯಷ್ಟು ಜನರಷ್ಟೇ ಪಾಲ್ಗೊಂಡು ಅಹವಾಲು ಸಲ್ಲಿಸಿದರು.