೧೦ ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರ ಪರದಾಟ

manavi
Published on

ಮಡಿಕೇರಿ: ರಸ್ತೆ ಅವ್ಯವಸ್ಥೆ ಮತ್ತು ವಿದ್ಯುತ್ ಕಡಿತದಿಂದ ಆಗುತ್ತಿರುವ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಚೇರಂಬಾಣೆ-ಬೇಂಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯಿತಿ ಸದಸ್ಯರಿಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

ಚೇರಂಬಾಣೆ-ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಕ-ಕೊಳಗದಾಳು ಗ್ರಾಮದ ಜನರು ಕಳೆದ ೧೦ ದಿನಗಳಿಂದ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಹದಗೆಟ್ಟಿರುವ ರಸ್ತೆಯ ಹೊಂಡಗುಂಡಿಗಳಿಂದ ಬೇಸತ್ತಿರುವ ಗ್ರಾಮಸ್ಥರು ಆಡಳಿತ ವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಕ-ಕೊಳಗದಾಳು ಗ್ರಾಮದ ರಸ್ತೆಗಳು ಗುಂಡಿಮಯವಾಗಿದ್ದು, ಮಳೆ ನೀರು ನಿಂತು ವಾಹನಗಳ ಸಂಚಾರ ಹಾಗೂ ಸಾರ್ವಜನಿಕರ ಓಡಾಟ ಅಸಾಧ್ಯವಾಗಿದೆ. ಹೊಂಡಗುಂಡಿಗಳಲ್ಲಿ ರಸ್ತೆಯನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕಳೆದ ಹತ್ತು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆಯುವಂತ್ತಾಗಿದೆ. ವಯೋವೃದ್ಧರು ಕಷ್ಟ ಪಡುವಂತ್ತಾಗಿದ್ದು, ವಿದ್ಯಾರ್ಥಿಗಳ ವಿದ್ಯಾರ್ಜನೆಗೂ ಅಡಚಣೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಮನವಿಗೆ ಯಾವುದೇ ಸ್ಪಂದನೆ ದೊರೆಯದೇ ಇದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ಕಿಶೋರ್ ಕುಮಾರ್, ಗ್ರಾಮಸ್ಥರಾದ ಮನೋಹರ್, ದಯಾನಂದ, ಕಿರಣ್, ಪ್ರದೀಪ್, ಜೀವನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net