ಟ್ಯಾಂಕರ್ ದಂಧೆಗೆ ಗ್ರಾಮಸ್ಥರ ತಡೆ

Published on

ಅಂತರ್ಜಲಕ್ಕೆ ಮಾರಕ ಸಂಪೂರ್ಣ ನಿರ್ಬಂಧಕ್ಕೆ ಒತ್ತಾಯ

ಮುತ್ಸಂದ್ರದಲ್ಲಿ ಅಕ್ರಮ ಟ್ಯಾಂಕರ್ ನೀರಿನ ಸರಬರಾಜು ತಡೆಗೆ ಆಗ್ರಹಿಸಿ ಗ್ರಾಮದ ಮುಖಂಡರು ಸಭೆಯಲ್ಲಿ ಗ್ರಾಪಂ ಸದಸ್ಯ ಪಟೇಲ್ ಬಾಬು ಮಾತನಾಡಿದರು. ಮುರಳಿ ಮತ್ತಿತರರು ಇದ್ದರು.
ಮುತ್ಸಂದ್ರದಲ್ಲಿ ಅಕ್ರಮ ಟ್ಯಾಂಕರ್ ನೀರಿನ ಸರಬರಾಜು ತಡೆಗೆ ಆಗ್ರಹಿಸಿ ಗ್ರಾಮದ ಮುಖಂಡರು ಸಭೆಯಲ್ಲಿ ಗ್ರಾಪಂ ಸದಸ್ಯ ಪಟೇಲ್ ಬಾಬು ಮಾತನಾಡಿದರು. ಮುರಳಿ ಮತ್ತಿತರರು ಇದ್ದರು.

ಹೊಸಕೋಟೆ: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮುತ್ಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಕೊಳವೆ ಬಾವಿ ನೀರನ್ನು ಟ್ಯಾಂಕರ್ ಮೂಲಕ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಸರಬರಾಜು ಮಾಡುವ ಮೂಲಕ ಗ್ರಾಮಗಳಲ್ಲಿನ ಅಂತರ್ಜಲಕ್ಕೆ ಕುತ್ತು ತರಲಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಟ್ಯಾಂಕರ್ ದಂಧೆಗೆ ತಡೆಹಾಕಿದ್ದಾರೆ.
ಟ್ಯಾಂಕರ್ ದಂಧೆ ದಿನದಿನಕ್ಕೆ ವ್ಯಾಪಕವಾಗಿ ಬೆಳೆಯುತ್ತಿದ್ದು, ಇದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂರ್ತಜಲ ಕುಸಿತದಿಂದ ಕೃಷಿ ಚಟುವಟಿಕೆ ಜತೆ ಸಾರ್ವಜನಿಕ ಬಳಕೆಗೆ ನೀರಿನ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಶರತ್ ಬಚ್ಚೇಗೌಡ ಅವರು ಬೆಸ್ಕಾಂ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡ ರಚನೆ ಮಾಡಿ, ಟ್ಯಾಂಕರ್ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ ಎನ್ನಲಾಗಿದ್ದು, ಇದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಜಮೀನುಗಳಲ್ಲಿ ನೀರಿನ ಸಮಸ್ಯೆ ಕೊಂಚ ಮಟ್ಟಿಗೆ ಸುಧಾರಿಸಿದೆ. ಸಾರ್ವಜನಿಕರ ಬಳಕೆಗೂ ನೀರು ದೊರೆಯುತ್ತಿದೆ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಅಕ್ರಮ ನೀರಿನ ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ರಸ್ತೆಗಳೂ ಹಾಳು: ಮುತ್ಸಂದ್ರ ಗ್ರಾಮದಿಂದ ನೀರು ಟ್ಯಾಂಕರ್ ಮೂಲಕ ಮಹದೇವಪುರ ಕ್ಷೇತ್ರಕ್ಕೆ ಪೂರೈಕೆಯಾಗುತ್ತಿದ್ದು, ಈ ಭಾಗದ ರಸ್ತೆಗಳೆಲ್ಲ ಹಾಳಾಗಿದೆ. ಟ್ಯಾಂಕರ್ ಚಾಲಕರ ಅಜಾಗರೂಕತೆ ಚಾಲನೆಯಿಂದ ಅಫಘಾತಗಳು ಸಂಭವಿಸುತ್ತಿವೆ, ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ, ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಶರತ್ ಬಚ್ಚೇಗೌಡ ನಿರ್ಧಾರ ಕೈಗೊಂಡು ನೀರು ಸರಬರಾಜಿಗೆ ಕಡಿವಾಣ ಹಾಕಿರುವುದು ಪ್ರಶಂಸನೀಯ ಎಂದು ಗ್ರಾಪಂ ಸದಸ್ಯೆ ವಿನೋದಮ್ಮ ತಿಳಿಸಿದ್ದಾರೆ.

ಅಕ್ರಮಕ್ಕೆ ಬೆಸ್ಕಾಂ ಬೆಂಬಲ
ನೂತನ ಬಡಾವಣೆಗಳಲ್ಲಿ ನಿವೇಶನ ಪಡೆದು ಕೊಳವೆಬಾವಿ ಕೊರೆಸಿ ಹಾಗೂ ಕೃಷಿ ಭೂಮಿಗಳಲ್ಲಿ ಕೃಷಿ ಚಟುವಟಿಕೆಗೆಂದು 3-4 ಕೊಳವೆಬಾವಿ ಕೊರೆಸಿ, ಈ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿದ್ದಾರೆ. ಇದಕ್ಕೆ ಬೆಸ್ಕಾಂ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಯಾವ ಉದ್ದೇಶಕ್ಕೆ ವಿದ್ಯುತ್ ನೀಡಲಾಗಿದೆ ಹಾಗೂ ಬಳಕೆ ಮಾಡುತ್ತಿದ್ದಾರೆ ಎಂದು ಪರಿಶೀಲಿಸಿದರೆ ಸತ್ಯ ತಿಳಿಯಲಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಮನೆ ಬಳಕೆಗೆ ವಿದ್ಯುತ್ ಮೀಟರ್ ಪಡೆದು ರಾತ್ರಿ ಸಮಯದಲ್ಲಿ ಟ್ಯಾಂಕರ್ ನೀರು ಸರಬರಾಜಿಗೆ ಬಳಸಿಕೊಳ್ಳುತ್ತಿದ್ದ ಪ್ರಕರಣಗಳು ಕಂಡುಬಂದಿದ್ದು, ಕಳೆದ ವಾರ ತಂಡ ರಚಿಸಿಕೊಂಡು ಸುಮಾರು 26 ವಿದ್ಯುತ್ ಸಂಪರ್ಕಗಳನ್ನು ಕಡಿತ ಮಾಡಲಾಗಿದೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಪುಟ್ಟಸ್ವಾಮಿ ಎಇಇ ಬೆಸ್ಕಾಂ

400 ಕ್ಕೂ ಹೆಚ್ಚು ಟ್ಯಾಂಕರ್ ಮಾಲೀಕರು ಪ್ರತ್ಯೇಕವಾಗಿ ಸಭೆ ನಡೆಸಿ ಬೆಂಗಳೂರಿಗೆ ನೀರು ಸರಬರಾಜು ಮಾಡಲು ನ್ಯಾಯಾಲಯದ ಮೊರೆಹೋಗುವ ನಿರ್ಧಾರ ಕೈಗೊಂಡಿದ್ದಾರೆ. ಒಂದು ವೇಳೆ ಅವರು ನ್ಯಾಯಾಲಯದ ಮೊರೆ ಹೋದಲ್ಲಿ ನಾವೂ ನಮ್ಮ ನೀರು ನಮ್ಮ ಹಕ್ಕು ಎಂದು ನ್ಯಾಯಾಲಯಕ್ಕೆ ಮೊರೆ ಹೋಗಲಿದ್ದೇವೆ.
ಬಾಬು ರೆಡ್ಡಿ ಗ್ರಾಮದ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net