ಸಭೆಯಲ್ಲಿ ದೂರಿನ ಸುರಿಮಳೆಗೈದ ಗ್ರಾಮಸ್ಥರು

06 HANUR 2
ಹನೂರು ತಾಲೂಕಿನ ರಾಮಾಪುರದಲ್ಲಿ ಆಯೋಜಿಸಿದ್ಧ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ರವಿ, ನವೀನ್ ಮಠದ್, ಸಿದ್ದಪ್ಪ, ನಾರಾಯಣ್, ಸೆಲ್ವರಾಜ್ ಇತರರು ಇದ್ದರು.
Published on

ಹನೂರು : ತಾಲೂಕಿನ ರಾಮಾಪುರದಲ್ಲಿ ಬುಧವಾರ ಆಯೋಜಿಸಿದ್ಧ 2022-23ನೇ ಸಾಲಿನ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣಾ ಸಭೆಯಲ್ಲಿ ಗ್ರಾಮಸ್ಥರು ದೂರಿನ ಸುರಿಮಳೆಗೈದರು. ಈ ಮೂಲಕ ಸಭೆಯು ಗೊಂದಲದ ಗೂಡಾಯಿತು.

ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷ ರವಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆರಂಭದಲ್ಲೇ ಧ್ವನಿವರ್ಧಕ ಇಲ್ಲದ ಪರಿಣಾಮ ನೆರೆದಿದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಧ್ವನಿವರ್ಧಕದ ವ್ಯವಸ್ಥೆ ಮಾಡಲಾಯಿತು. ಸಭೆಯಲ್ಲಿ ನರೇಗಾ ಯೋಜನೆಯಡಿ ಕೈಗೊಳ್ಳಲಾಗಿದ್ದ ಕಾಮಗಾರಿಗಳ ವಿವರವನ್ನು ಮಂಡನೆ ಮಾಡಲಾಗುತ್ತಿತ್ತು. ಆದರೆ ಅಸಮರ್ಪಕ ಮಾಹಿತಿಯಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಮಸ್ಥರಾದ ಜಗದೀಶ್ ಹಾಗೂ ವೀರಪ್ಪನ್ ಎಂಬುವರು ಮಾತನಾಡಿ, ಕೊಟ್ಟಿಗೆ ನಿರ್ಮಿಸಿ 3 ವರ್ಷವೇ ಕಳೆದಿದ್ದು, ನರೇಗಾ ಯೋಜನೆಯಡಿ 6 ಸಾವಿರ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. ಆದರೆ ಲೆಕ್ಕ ವಿವರದಲ್ಲಿ 18 ಸಾವಿರ ರೂ. ನಮೂದಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ? ಹಣ ಪಾವತಿಯಾಗದಿದ್ದರೂ ಜನರಿಗೆ ಅನ್ಯಾಯವೆಸಗಲಾಗುತ್ತಿದೆ. ಆದ್ದರಿಂದ ಬರಬೇಕಿರುವ ಅನುದಾನ ಬಿಡುಗಡೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮುತ್ತುಶೆಟ್ಟಿಯೂರಿನ ಕಳೆದ ಸಾಲಿನಲ್ಲಿ ನಡೆದಿರುವ ಕಾಮಗಾರಿಗಳು ಸಮರ್ಪಕವಾಗಿಲ್ಲ. ಆದ್ದರಿಂದ ಮುಂದೆ ಕೈಗೊಳ್ಳಬೇಕಿರುವ ಕಾಮಗಾರಿಗಳ ಬಗ್ಗೆ ಪಟ್ಟಿ ತಯಾರಿಸಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದರು.

ಪುದು ರಾಮಾಪುರ ಗ್ರಾಮದ ನೀಲಾಮಣಿ ಎಂಬುವರು ಮಾತನಾಡಿ, ಗ್ರಾಮದಲ್ಲಿ ಹಲವು ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ತುಂಬ ತೊಂದರೆ ಅನುಭವಿಸುತ್ತಿದ್ದೇವೆ. ನರೇಗಾ ಯೋಜನೆಯಡಿ ಪ್ರತಿ ವ್ಯಕ್ತಿಗೆ 100 ದಿನ ಉದ್ಯೋಗ ನೀಡಬೇಕು. ಆದರೆ 20 ದಿನ ಮಾತ್ರ ಉದ್ಯೋಗ ನೀಡಲಾಗುತ್ತಿದೆ. ಇದರಿಂದ ಜನರಿಗೆ ಸಮರ್ಪಕ ಉದ್ಯೋಗ ಸಿಗುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ನರೇಗಾ ಯೋಜನೆಯಡಿ ಕೈಗೊಳ್ಳಲಾಗಿದ್ದ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದು ಮಾತಿನ ಚಕಮಕಿ ನಡೆಸಿದರು. ಇದರಿಂದ ಕೆಲ ಕಾಲ ಗೊಂದಲ ಉಂಟಾಗಿತ್ತು. ಬಳಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಗತ್ಯ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಸಮಾಧಾನಗೊಂಡರು.

ಸದುಪಯೋಗ ಪಡಿಸಿಕೊಳ್ಳಿ: ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನವೀನ್ ಮಠದ್ ಮಾತನಾಡಿ, ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ. ಈ ಯೋಜನೆಯಡಿ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಆದ್ದರಿಂದ ಇದರ ಪ್ರಯೋಜನ ಪಡೆಯಬೇಕು. ಈ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪಿಡಿಒ ಸೆಲ್ವರಾಜ್, ನರೇಗಾ ಯೋಜನೆ ವ್ಯವಸ್ಥಾಪಕರಾದ ಸಿದ್ದಪ್ಪ, ನಾರಾಯಣ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net