ಗೌರಿ ಹಬ್ಬಕ್ಕೆ ಮಹಿಳೆಯರಿಗೆ ಬಾಗೀನ ವಿತರಣೆ, ಬೆಂಕಿ ಹಾಕಿ ಸುಟ್ಟ ಗ್ರಾಮಸ್ಥರು

IMG_20250731_154104.jpg
Published on

ಚಿಕ್ಕಬಳ್ಳಾಪುರ: ಗೌರಿ ಗಣೇಶ ಹಬ್ಬದ ಕೊಡುಗೆಯಾಗಿ ಗೌಡ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ವಿತರಿಸಿದ ಬಾಗಿನಕ್ಕೆ ರಾಜಕೀಯದ ಬೆಂಕಿ ಹೊತ್ತುಕೊಂಡಿದೆ!.
ಶಾಸಕ ಪುಟ್ಟಸ್ವಾಮಿ ಗೌಡ ಕಳೆದ 5 ವರ್ಷದಿಂದ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಗೌರಿಬಿದನೂರು ತಾಲೂಕಿನ ಎಲ್ಲ ಮಹಿಳೆಯರಿಗೆ ತಮ್ಮ ಸಂಸ್ಥೆ ಮೂಲಕ ಬಾಗಿನ ವಿತರಿಸುತ್ತಾ ಬರುತ್ತಿದ್ದಾರೆ. ಆದೇ ರೀತಿ ಈ ಬಾರಿ ಕೂಡ ವಿತರಿಸುತ್ತಿದ್ದಾರೆ. 2 ದಿನಗಳ ಹಿಂದೆ ತಾಲೂಕಿನ ವಾಟದಹೊಸಹಳ್ಳಿ ಭಾಗದಲ್ಲಿ ಕೂಡ ವಿತರಿಸಿದ್ದರು. ಆದರೆ ಕೆಲವು ಮಹಿಳೆಯರು ಬಾಗಿನವನ್ನು ಸ್ವೀಕರಿಸಿ ಸಾರ್ವಜನಿಕವಾಗಿ ಸುಟ್ಟು ಹಾಕಿದ್ದಾರೆ.
ವಾಟದಹೊಸಹಳ್ಳಿ ಕೆರೆಯಿಂದ ನಗರಕ್ಕೆ ನೀರು ಹರಿಸುವ ಯೋಜನೆಯನ್ನು ವಿರೋಧಿಸಿ ಮಹಿಳೆಯರು ಬಾಗಿನದ ರೂಪದಲ್ಲಿ ನೀಡಿದ್ದ ಸೀರೆಗಳನ್ನು ಸುಟ್ಟು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದೂ ಸಂಸ್ಕೃತಿಯಲ್ಲಿ ಬಾಗಿನಕ್ಕೆ ವಿಶೇಷ ಸ್ಥಾನಮಾನವಿದೆ. ತಮಗೆ ಇಷ್ಟವಿಲ್ಲದಿದ್ದರೆ ಸ್ವೀಕರಿಸದೇ ನಿರಾಕರಿಸುವ ಮೂಲಕ ವಿರೋಧ ವ್ಯಕ್ತಪಡಿಸಬಹುದಿತ್ತು. ಆದರೆ, ಸ್ವೀಕರಿಸಿ ಬೆಂಕಿ ಹಚ್ಚಿರುವುದು ಟೀಕೆಗೆ ಗ್ರಾಸವಾಗಿದೆ. ಶಾಸಕ ಪುಟ್ಟಸ್ವಾಮಿ ಗೌಡರ ರಾಜಕೀಯ ವಿರೋಧಿಗಳು ಉದ್ದೇಶಪೂರ್ವಕವಾಗಿ ಮಹಿಳೆಯರಿಗೆ ಕುಮ್ಮಕ್ಕು ನೀಡಿ ಈ ಕೆಲಸ ಮಾಡಿದ್ದಾರೆ ಎಂಬ ರಾಜಕೀಯ ಬಣ್ಣ ಪಡೆದುಕೊಂಡಿದೆ.
ಎತ್ತಿನ ಹೊಳೆ ವ್ಯಾಪ್ತಿಗೆ ಕೆರೆ ಸೇರ್ಪಡೆ, ಕೆರೆ ಹೂಳೆತ್ತುವುದು, ತೂಬು ದುರಸ್ತಿ ಸೇರಿದಂತೆ ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟುದಾರರ ಎಲ್ಲ ಬೇಡಿಕೆ ಈಡೇರಿಸುವುದಕ್ಕೆ ಶಾಸಕರು ಹಾಗೂ  ನಗರಾಭಿವೃದ್ಧಿ  ಸಚಿವ ಭೈರತಿ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ. ಸಿ. ಸುಧಾಕರ್ ಇಬ್ಬರೂ  ಸಚಿವರು ಸಮ್ಮತಿ ಸೂಚಿಸಿದ್ದಾರೆ. ಆದಾಗ್ಯೂ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net