

ಚನ್ನಗಿರಿ: ತಾಲೂಕಿನ ನಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಅವ್ಯವಹಾರದ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ನಲ್ಲೂರು ಅಪ್ಪು ಅಭಿಮಾನಿ ಬಳಗದ ಅಧ್ಯಕ್ಷ ಎಚ್.ದಿನೇಶ್‌ಕುಮಾರ್ ತಿಳಿಸಿದರು.
ತಾಲೂಕಿನಲ್ಲಿ ಬುಧವಾರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅವ್ಯವಹಾರ ಖಂಡಿಸಿ ಗ್ರಾಮಸ್ಥರು ಗ್ರಾಮದ ಗಡಿಮಾರಮ್ಮ ದೇವಿ ದೇವಸ್ಥಾನದಿಂದ ಪ್ರತಿಭಟನೆ ನಡೆಸಿದರು.
ಗ್ರಾಪಂನಲ್ಲಿ ವಸತಿ ಉದ್ದೇಶಕ್ಕೆ ಭೂಪರಿವರ್ತನೆಯಾದ ಆಸ್ತಿಗಳನ್ನು ಮತ್ತು ಗ್ರಾಪಂನಲ್ಲಿ ಖಾತೆ ಮಾಡುವಾಗ ಸರ್ಕಾರದ ನಿಯಮ ಉಲ್ಲಂಘನೆ ಮಾಡಲಾಗಿದೆ. ಗ್ರಾಮ ಠಾಣಾ ಆಸ್ತಿಗಳನ್ನು ಒತ್ತುವರಿ ಮಾಡಿ ಹಾಗೂ ಸಿಎ ನಿವೇಶಗಳನ್ನು ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸಿಕೊಂಡಿದ್ದಾರೆ. ಗ್ರಾಮದ ಕೆರೆಗಳನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿದ ಆಸ್ತಿಯ ಮಾಲೀಕರು ಗ್ರಾಮ ಪಂಚಾಯಿತಿಗೆ ಸಿಎ ನಿವೇಶವನ್ನು ನೀಡದೆ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎಂದರು.
ಅಕ್ರಮ ಕಟ್ಟಡ ತೆರವುಗೊಳಿಸುವಂತೆ ನ್ಯಾಯಾಲಯದ ಆದೇಶವಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸಾರ್ವಜನಿಕ ಉದ್ಯಾನಕ್ಕೆ ಮೀಸಲಿಟ್ಟ ನಿವೇಶನವನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ಅವರು ಕಟ್ಟಡ ನಿರ್ಮಿಸಿ ಬಾಡಿಗೆ ಪಡೆಯುತ್ತಿದ್ದಾರೆ.
ಗಡಿಮಾರಮ್ಮ ದೇವಸ್ಥಾನದ ಹತ್ತಿರವಿರುವ ಗೋಕಟ್ಟೆ ಹಾಗೂ ನಲ್ಲೂರು, ಚನ್ನಗಿರಿ, ದಾವಣಗೆರೆ ಮುಖ್ಯರಸ್ತೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿ ಕಂಕರಗುಂಡಿ ಗ್ರಾಮ ಠಾಣಾ ನಿವೇಶನವನ್ನು ಜನಪ್ರತಿನಿಧಿಗಳು ಅಧಿಕಾರ ಚಲಾಯಿಸಿ ಸ್ವಂತ ಹೆಸರಿಗೆ ಇ-ಖಾತೆ ಮಾಡಿಸಿಕೊಂಡಿದ್ದಾರೆ. ಅವ್ಯವಹಾರ ನಡೆದಿರುವ ಕುರಿತು ಸಂಬಂಧಿಸಿದ ಮೇಲಧಿಕಾರಿಗಳಿಂದ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಬಿ.ಕೆ. ಉತ್ತಮ ಮನವಿ ಸ್ವೀಕರಿಸಿ ಮಾತನಾಡಿ, ಅಕ್ರಮ ನಡೆದಿರುವ ಕುರಿತು ಮಾಹಿತಿ ಇಲ್ಲ. ಈಗ ಮಾಹಿತಿ ಪಡೆದಿದ್ದೇನೆ. 10 ದಿನಗಳ ಒಳಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಮಡಿವಾಳ ಸಮಾಜದ ಅಧ್ಯಕ್ಷ ಚಂದ್ರಪ್ಪ, ವೀರಶೈವ ಸಮಾಜದ ಮುಖಂಡರಾದ ಪುಟ್ಟಪ್ಪ, ರಾಜಪ್ಪ, ಪಿ.ಸಿ. ನಾಗರಾಜ್, ಉಪ್ಪಾರ ಸಮಾಜದ ಮುಖಂಡರಾದ ಸಿ.ವಿಶ್ವನಾಥ್, ಎಚ್. ದಿನೇಶ್‌ಕುಮಾರ್, ಕೆ.ಬಿ. ರುದ್ರಮುನಿ, ಕನ್ನಡ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಡಿ. ರುದ್ರೇಶ್, ಸರ್ವೆ ಸುರೇಶ್, ಗ್ರಾಪಂ ಮಾಜಿ ಅಧ್ಯಕ್ಷ ಖಲೀಲ್ ಅಹ್ಮದ್, ಅನಿಲ್‌ಕುಮಾರ್, ಮಾಜಿ ಸದಸ್ಯ ಸೈಪುಲ್ಲಾ ಇದ್ದರು.