ಕೆ.ಹೊನ್ನಲಗೆರೆಯಲ್ಲಿ ಗ್ರಾಮಸ್ಥರ ಪ್ರತಿಭಟನೆ

06M.D.R.1
ಸರ್ಕಾರಿ ಶಾಲೆಯ ಜಾಗವನ್ನು ಅತಿಕ್ರಮಣ ತಡೆಗೆ ಆಗ್ರಹಿಸಿ ಕೆ.ಹೊನ್ನಲಗೆರೆಯಲ್ಲಿ ಗ್ರಾಮಸ್ಥರು ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪುಟ್ಟಸ್ವಾಮಿ, ಶಿವರಾಮು, ಬಿಜೆಪಿ ಸ್ವಾಮಿ, ಪ್ರವೀಣ್, ಮುತ್ತುರಾಜು, ಅಪ್ಪಾಜಿಗೌಡ ಇದ್ದರು.
Published on

ಮದ್ದೂರು: ಗ್ರಾಮದ ಸರ್ಕಾರಿ ಶಾಲೆಯ ಜಾಗ ಒತ್ತುವರಿ ತೆರವಿಗೆ ಆಗ್ರಹಿಸಿ ತಾಲೂಕಿನ ಕೆ.ಹೊನ್ನಲಗೆರೆಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು, ಗ್ರಾಮದ ಮದ್ದೂರು ಸಂಪರ್ಕ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.

ಮುಖಂಡ ಪುಟ್ಟಸ್ವಾಮಿ ಮಾತನಾಡಿ, ಗ್ರಾಮದ ಇಬ್ಬರು ವ್ಯಕ್ತಿಗಳು ಹಲವು ವರ್ಷಗಳ ಹಿಂದೆ ಸರ್ಕಾರಿ ಶಾಲೆಯ ಆವರಣಕ್ಕೆ ಹೊಂದಿಕೊಂಡಂತಿದ್ದ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು, ಪ್ರಸ್ತುತ ಶಾಲಾ ಆವರಣವಿರುವ 4.5 ಎಕರೆ ಜಾಗವೂ ನಮ್ಮದು ಎಂದು ತಹಸೀಲ್ದಾರ್ ಮೇಲೆ ಒತ್ತಡ ಹೇರಿ ಖಾತೆ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಿ ಶಾಲೆಯ ಜಾಗವು ಗ್ರಾಮದ ಎರಡು ದೇವಸ್ಥಾನಗಳ ಇನಾಮ್ ಜಾಗ ಎಂದು ಹೇಳಲಾಗುತ್ತದೆ. ಆದರೆ ಈಗಾಗಲೇ ಆ ಇಬ್ಬರು ಶಾಲೆಯ ಆವರಣದ ಹಿಂದೆ ಇರುವ ಜಮೀನನ್ನು ಖಾತೆ ಮಾಡಿಸಿಕೊಂಡಿದ್ದು, ಈಗ ಶಾಲಾ ಅವರಣದ ಜಾಗ ಕೂಡ ತಮಗೆ ಸೇರಬೇಕೆಂದು ಖಾತೆ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದಾರೆ. ಇವರ ಹೆಸರಿಗೆ ಶಾಲೆಯ ಆವರಣದ ಜಾಗ ಖಾತೆಯಾಗದಂತೆ ತಹಸೀಲ್ದಾರ್ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸೋಮಶೇಖರ್‌ಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್, ಸರ್ಕಾರಿ ಶಾಲೆ ಆವರಣದ ಜಾಗ ಖಾತೆ ಮಾಡಿಕೊಡಲು ಗ್ರಾಮದ ಇಬ್ಬರು ಕೋರಿದ್ದು, ಸಂಬಂಧಪಟ್ಟ ದಾಖಲೆ ಪರಿಶೀಲಿಸಲಾಗುವುದು. ಆದರೆ ಸರ್ಕಾರಿ ಶಾಲೆಯ ಜಾಗವನ್ನು ಬೇರೆಯವರಿಗೆ ಖಾತೆ ಮಾಡಿಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಬಳಿಕ ಪ್ರತಿಭಟನಾಕಾರರು ಹೋರಾಟ ಹಿಂಪಡೆದರು.

ಸಿಪಿಐ ಶಿವಕುಮಾರ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಖಂಡರಾದ ಪುಟ್ಟಸ್ವಾಮಿ, ಶಿವರಾಮು, ಬಿಜೆಪಿ ಸ್ವಾಮಿ, ಪ್ರವೀಣ್, ಮುತ್ತುರಾಜು, ಅಪ್ಪಾಜಿಗೌಡ ಸೇರಿದಂತೆ ಇತರ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net