

ಕಲ್ಕುಂದ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ವರುಣ ವ್ಯಾಪ್ತಿಗೆ ಸೇರಿದ ಕಾಮಹಳ್ಳಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಆಗ್ರಹಿಸಿ ಕಲ್ಕುಂದ ಗ್ರಾಮದಲ್ಲಿ ನಿರ್ಮಿಸಿರುವ ಘಟಕದ ಮುಂದೆ ಪ್ರತಿಭಟನೆ ನಡೆಸಿದರು.
ನೀರು ಪೂರೈಕೆ ಹೊಣೆ ಹೊತ್ತಿರುವ ಕಂಪನಿ ವಿರುದ್ಧ ಧಿಕ್ಕಾರದ ಘೋಷಣೆ ಹಾಕಿದರು. ಘಟಕದ ನಿರ್ವಹಣೆಯ ಕೆಲಸ ಕಳಪೆಯಿಂದ ಕೂಡಿದ್ದು, ಯಂತ್ರಗಳು ಕೆಟ್ಟು ಹೋಗಿವೆ. ಹೀಗಾಗಿ ಕಲುಷಿತ ನೀರು ಪೂರೈಕೆ ಆಗುತಿತ್ತು. ಈಗ ಆ ನೀರು ಕೂಡ ಎರಡು ತಿಂಗಳಿಂದ ಯಾವ ಗ್ರಾಮಗಳಿಗೂ ಪೂರೈಕೆ ಆಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನೌಕರರಿಗೆ ಏಳು ತಿಂಗಳಿಂದ ಸಂಬಳ ನೀಡಿಲ್ಲ. ಆದ್ದರಿಂದ ನಾವು ನೀರು ಬಿಟ್ಟಿಲ್ಲ ಎಂದು ಕೆಲಸಗಾರರು ಈ ಸಂದರ್ಭದಲ್ಲಿ ಹೇಳಿದರು. ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಇಂಜಿನಿಯರ್ ಪ್ರವೀಣ್ ಮಾತನಾಡಿ, ಪ್ರಸ್ತುತ ಕಂಪನಿಗೆ ಒಂದು ತಿಂಗಳು ಮಾತ್ರ ನಿರ್ವಹಣೆ ಅವಧಿ ಇದ್ದು, ಮುಗಿದ ಬಳಿಕ ಬೇರೆಯವರಿಗೆ ಟೆಂಡರ್ ನೀಡಿ ಎಲ್ಲವನ್ನೂ ಸರಿಪಡಿಸುತೇವೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ನಿಮಗೆ ಕುಡಿಯುವ ನೀರು ಪೂರೈಸುತ್ತೇವೆ. ಕೊಳವೆ ಬಾವಿಯಲ್ಲಿ ಕೆಟ್ಟಿರುವ ಮೋಟರ್ ತೆಗೆದು, ಬೇರೆ ಮೋಟಾರ್ ಹಾಕಿಸಿ ಕೊಡುತೇವೆ ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.
ಪಿಡಿಒ ಗಣೇಶ್, ಸದಸ್ಯರಾದ ನಂಜುಂದಸ್ವಾಮಿ, ಮಾದೇಗೌಡ, ಮಾಜಿ ಸದಸ್ಯ ಪುಟ್ಟಬಸವೇಗೌಡ, ಮುಖಂಡರಾದ ಕಾಮಹಳ್ಳಿ ಸುರೇಶ್, ಮಹದೇವಸ್ವಾಮಿ, ರಂಗನಾಯ್ಕ, ಮಹದೇವು, ರಾಜಣ್ಣ, ರತ್ನಾಶೇಖರ್, ಗ್ರಾಮಸ್ಥರು ಹಾಜರಿದ್ದರು.