

ಮಂಡ್ಯ: ಸದಸ್ಯರು ಉದ್ದೇಶಪೂರ್ವಕವಾಗಿ ಐದು ಸಾಮಾನ್ಯ ಸಭೆಗಳಿಗೆ ಸತತವಾಗಿ ಗೈರಾಗುವುದರ ಜತೆಗೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ತಾಲೂಕಿನ ತೂಬಿನಕೆರೆ ಗ್ರಾಮಸ್ಥರು ಮಂಗಳವಾರ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಪಂ ಕಚೇರಿ ಎದುರು ಜಮಾಯಿಸಿದ ಎಲೆಚಾಕನಹಳ್ಳಿ, ನೊದೆಕೊಪ್ಪಲು, ಉರಮಾರಕಸಲಗೆರೆ, ತೂಬಿನಕೆರೆ ಗ್ರಾಮಸ್ಥರು, ಮಾಜಿ ಅಧ್ಯಕ್ಷರು ಹಾಗೂ ಕೆಲ ದಿನಗಳ ಹಿಂದೆ ಅಧ್ಯಕ್ಷ ವೈ.ಬಿ.ಅಶೋಕ್‌ಗೌಡ ಪಟೇಲ್ ವಿರುದ್ಧ ಪ್ರತಿಭಟಿಸಿದವರ ವಿರುದ್ಧವೂ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷ ವೈ.ಬಿ.ಅಶೋಕ್‌ಗೌಡ ಪಟೇಲ್ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯ, ಉಪಾಧ್ಯಕ್ಷ, ಅಧ್ಯಕ್ಷನಾಗಿ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಒಂದು ಸಾಮಾನ್ಯ ಸಭೆಗೂ ಗೈರಾಗಿಲ್ಲ. ಈಗ ನಾನು ಅಧ್ಯಕ್ಷನಾದ ನಂತರ ಕೆಲ ಸದಸ್ಯರು ಮತ್ತು ಮಾಜಿ ಅಧ್ಯಕ್ಷರು ಇಲ್ಲದ ಗೊಂದಲ ಸೃಷ್ಟಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಉರಮಾರಕಸಲಗೆರೆ ಗ್ರಾಮದಲ್ಲಿ ಭೂಸೇನಾ ವತಿಯಿಂದ ನಡೆಸಲು ಉದ್ದೇಶಿಸಿರುವ ಕಾಮಗಾರಿಗೆ ಕೆಲವರು ಶೇ.8ರಷ್ಟು ಕಮಿಷನ್ ಪಡೆದಿದ್ದು, ಈಗ ಕಾಮಗಾರಿ ಪ್ರಾರಂಭವಾಗಿದೆ. ಈ ನಡುವೆ ಬಿಲ್‌ಗೆ ಸಹಿ ಹಾಕುವಂತೆ ಒತ್ತಡ ಹೇರಿದ್ದು, ನಾನು ಅದಕ್ಕೆ ಒಪ್ಪದ ಕಾರಣ ಸಭೆಗೆ ಗೈರಾಗುವ ಮೂಲಕ ಸಾರ್ವಜನಿಕ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ದೂರಿದರು.
ಜ.24ರಂದು ಸಾಮಾನ್ಯ ಸಭೆ ನಿಗದಿಯಾಗಿತ್ತು. ನಾನು ಮತ್ತು ಐದಾರು ಸದಸ್ಯರು ಮಾತ್ರ ಹಾಜರಿದ್ದೆವು. ಆದರೆ, 10 ಸದಸ್ಯರ ಕೋರಂ ಅಗತ್ಯವಿರುವ ಕಾರಣ ನಾನು 11.40 ರವರೆಗೆ ಕಾದು ಸಭೆ ಮುಂದೂಡಿ ಹೊರಗೆ ತೆರಳಿದ್ದೆ. 12.30ರಲ್ಲಿ ಆಗಮಿಸಿರುವ ಕೆಲ ಸದಸ್ಯರು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ ಎಂದ ಅವರು, ಇನ್ನಾದರೂ ಸರಿಯಾಗಿ ಸಭೆ ನಡೆಸಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗವಿ, ಭಾರತಿ, ವಸಂತಾ, ವಿದ್ಯಾ ಸೋಮಶೇಖರ್, ಪ್ರಭು, ಕಿರಣ್, ಶ್ರೀನಿವಾಸ್, ಕೃಷ್ಣೇಗೌಡ, ಚಿದಾನಂದ, ಚೇತನ್‌ಕುಮಾರ್, ಬಸವರಾಜು, ಪ್ರಸನ್ನಾಚಾರಿ, ಗೋವಿಂದಾಚಾರಿ, ಮಹೇಶ್, ಶಿವಲಿಂಗು ಇತರರಿದ್ದರು.