ತ್ಯಾಜ್ಯ ಘಟಕಕ್ಕೆ ಗ್ರಾಮಸ್ಥರ ವಿರೋಧ : ಮೈಂದೂರಿನಲ್ಲಿ ಸ್ಥಾಪಿಸುವ ಯೋಜನೆ ಚರ್ಚೆ

thyaja
Published on

ಸುಳ್ಯ: ಆಲೆಟ್ಟಿ ಗ್ರಾಮಕ್ಕೆ ಸಂಬಂಧಪಟ್ಟಂತೆ ಮೈಂದೂರು ಎಂಬಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಕಂದಾಯ ಇಲಾಖೆ ಸೂಚನೆಯಂತೆ ಸರ್ವೇ ಕಾರ್ಯ ನಡೆಸಿ ಜಾಗ ಗುರುತಿಸಲ್ಪಟ್ಟಿದ್ದ ಹಿನ್ನೆಲೆಯಲ್ಲಿ ಆಲೆಟ್ಟಿ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಭೆ ನಡೆದಿದ್ದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಪಂಚಾಯಿತಿ ಅಧ್ಯಕ್ಷೆ ವೀಣಾ ಆಲೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚಾಯಿತಿ ಸದಸ್ಯರ ಒಪ್ಪಿಗೆ ಪಡೆಯದೆ ಏಕಾಏಕಿ ತ್ಯಾಜ್ಯ ನಿರ್ವಹಣೆಗೆ ಸ್ಥಳ ಗುರುತಿಸಿದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಬಹಳ ಸುದ್ದಿಯಾಗಿರುವ ಕಲ್ಚರ್ಪೆ ಘನತ್ಯಾಜ್ಯ ಘಟಕದಿಂದ ಅನುಭವಿಸುತ್ತಿರುವ ಸಮಸ್ಯೆ ಕಂಡಿರುವ ನಾಗರಿಕರು ತಮಗೂ ಮುಂದೆ ಇದೇ ಪರಿಸ್ಥಿತಿ ಬರಬಹುದೆಂಬ ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಅಧ್ಯಕ್ಷೆ ವೀಣಾ ಆಲೆಟ್ಟಿ, ನಮ್ಮದು ದೊಡ್ಡ ಗ್ರಾಮವಾಗಿದ್ದು, ಸ್ವಚ್ಛತೆ ದೃಷ್ಟಿಯಿಂದ ಘನತ್ಯಾಜ್ಯ ಘಟಕ ಬೇಕೆಂಬುದು ಪ್ರತಿಯೊಬ್ಬರ ಬೇಡಿಕೆಯಾಗಿದೆ. ಕಳೆದ ಅವಧಿಯಲ್ಲಿ ಪ್ರಸ್ತಾಪಗೊಂಡ ವಿಚಾರವಾಗಿದ್ದು ನಮ್ಮ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸುವಂತೆ ಮೇಲಧಿಕಾರಿಗಳ ಒತ್ತಡ, ಗ್ರಾಮಸ್ಥರ ಒತ್ತಾಯ ಇರುವುದರಿಂದ ಘಟಕ ನಿರ್ಮಾಣ ಆಗಬೇಕಾಗಿದೆ. ಈಗಾಗಲೇ ಎಲ್ಲ ಗ್ರಾಮದಲ್ಲಿ ನಿರ್ವಹಣೆ ಚೆನ್ನಾಗಿದೆ. ಅದೇ ಮಾದರಿಯಲ್ಲಿ ವೈಜ್ಞಾನಿಕವಾಗಿ ಇಲ್ಲಿಯೂ ಕಸ ವಿಲೇವಾರಿ ನಿರ್ವಹಣೆ ಮಾಡುತ್ತೇವೆ. ಗ್ರಾಮಸಭೆಯಲ್ಲಿ ಪ್ರತಿ ಬಾರಿ ಈ ವಿಷಯದ ಕುರಿತು ಚರ್ಚೆ ನಡೆಯುತ್ತಿರುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಮಾಲೋಚನಾ ಸಭೆ ಕರೆಯಲಾಗಿದೆ. ಇದಕ್ಕೆ ನೀವು ವಿರೋಧಿಸುವುದಾದರೆ ಮುಂದೆ ಕಾನೂನು ಪ್ರಕಾರ ಏನು ಮಾಡಬೇಕು ಅದನ್ನು ಅಧಿಕಾರಿಗಳು ಮುಂದುವರಿಸುವಂತೆ ಪಂಚಾಯಿತಿ ನಿರ್ಣಯ ಮಾಡಿ ಪತ್ರ ಬರೆಯಲಾಗುವುದು ಎಂದರು.

ಪಂಚಾಯಿತಿ ಸದಸ್ಯರಾದ ಪುಷ್ಪಾವತಿ ಕುಡೆಕಲ್ಲು, ಸತ್ಯಪ್ರಸಾದ ಗಬ್ಬಲ್ಕಜೆ, ಸುದೇಶ್ ಅರಂಬೂರು, ವೇದಾವತಿ ನೆಡ್ಚಿಲು, ಭಾಗೀರಥಿ ಪತ್ತುಕುಂಮಜ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net