

ಎನ್.ಆರ್.ಪುರ: ತಾಲೂಕಿನ ಬಾಳೆ ಗ್ರಾಪಂನ ಅಳೇಹಳ್ಳಿ ಗ್ರಾಮಕ್ಕೆ ಸರ್ವೇ ನಡೆಸಲು ಬಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಅರಣ್ಯ ಇಲಾಖೆ ಸರ್ವೇ ಅಧಿಕಾರಿಗಳು ಅಳೇಹಳ್ಳಿ ಗ್ರಾಮಕ್ಕೆ ಆಗಮಿಸಿ ಸರ್ವೇ ನಡೆಸಲು ಮುಂದಾದರು. ಈ ಸುದ್ದಿ ತಿಳಿಯುತ್ತಿದ್ದಂತೆ ಮಲೆನಾಡು ರೈತ ಹಿತ ರಕ್ಷಣಾ ಸಮಿತಿ ಸದಸ್ಯರು, ಅಳೇಹಳ್ಳಿ ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು, ಸರ್ವೇ ಮಾಡುವಾಗ ಗ್ರಾಮ ಪಂಚಾಯಿತಿ, ಗ್ರಾಮ ಅರಣ್ಯ ಸಮಿತಿ ಹಾಗೂ ಸ್ಥಳೀಯ ರೈತರಿಗೆ ಯಾಕೆ ತಿಳಿಸಲಿಲ್ಲ ಎಂದು ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡು, ಸ್ಥಳಕ್ಕೆ ಡಿಎಫ್‌ಓ, ಆರ್‌ಎಫ್‌ಓ ಹಾಗೂ ಫಾರೆಸ್ಟ್ ಸೆಟ್ಲಮೆಂಟ್ ಆಫೀಸರ್ ಬರಬೇಕು. ಅಲ್ಲಿಯವರೆಗೆ ಸರ್ವೇ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಸರ್ವೇ ತಂಡದವರಿಗೂ, ಗ್ರಾಮಸ್ಥರಿಗೂ ತೀವ್ರ ವಾಗ್ವಾದ ಉಂಟಾಯಿತು.
ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ ಸ್ಥಳಕ್ಕಾಗಮಿಸಿ, ರೈತರೊಂದಿಗೆ ಚರ್ಚೆ ನಡೆಸಿದರು.ಸೆಕ್ಷನ್-4ರ ಗಡಿ ಗುರುತು ಮಾಡಲಾಗುತ್ತದೆ ಎಂದು ವಿವರಣೆ ನೀಡಿದರು. ಆದರೆ ರೈತರು ಯಾವುದೇ ಕಾರಣಕ್ಕೂ ಸರ್ವೇ ನಡೆಸಲು ಬಿಡುವುದಿಲ್ಲ ಎಂದರು. ನಂತರ ಶಾಸಕ ಟಿ.ಡಿ.ರಾಜೇಗೌಡ ಗ್ರಾಮಸ್ಥರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಸ್ಥಳೀಯರ ಗಮನಕ್ಕೆ ಬಾರದೆ ಸರ್ವೇ ನಡೆಸದಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಫಾರೆಸ್ಟ್ ಸೆಂಟ್ಲಮೆಂಟ್ ಆಫೀಸರ್, ತಹಸೀಲ್ದಾರ್, ಡಿಎಫ್‌ಓ ರೈತರ ಸಭೆ ಕರೆದು ಚರ್ಚೆ ನಡೆಸಿದ ನಂತರ ಸರ್ವೇ ಕಾರ್ಯ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು. ಉಪ ವಲಯ ಅರಣ್ಯಾಧಿಕಾರಿ ನಂದೀಶ, ರಂಗನಾಥ, ಗ್ರಾಮಸ್ಥರರಾದ ಅಧ್ಯಕ್ಷ ಎಂ.ಎನ್.ನಾಗೇಶ್, ಅಳೇಹಳ್ಳಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರವೀಂದ್ರ, ರತನ್ ಗೌಡ, ಶ್ರೀಕಾಂತ್, ರೇವಣ್ಣ, ಕಟ್ಟೇಗೌಡ ಇದ್ದರು.