ಬಾಣಲೆಯಿಂದ ಬೆಂಕಿಗೆ ಬಿದ್ದ ಮುಳ್ಳುಸೋಗೆ ಗ್ರಾಮಸ್ಥರು

Villagers of Mulluso who fell into the fire from the frying pan
Published on

ಮಡಿಕೇರಿ:

ಕುಶಾಲನಗರ ಪುರಸಭೆ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮಸ್ಥರ ಸ್ಥಿತಿ ಅಕ್ಷರಶಃ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಭಾರಿ ನಿರೀಕ್ಷೆಯೊಂದಿಗೆ ಕುಶಾಲನಗರ ಪುರಸಭೆಗೆ ಸೇರಿದ್ದ ಮುಳ್ಳುಸೋಗೆ ನಿವಾಸಿಗಳು ಈಗ ಪಶ್ಚಾತ್ತಾಪ ಪಡುವಂಥÀ ವಾತಾವರಣ ನಿರ್ಮಾಣ ಆಗಿದೆ. ಪುರಸಭೆಯಲ್ಲಿ ಗ್ರಾಮವನ್ನು ಪ್ರತಿನಿಧಿಸುವ ಚುನಾಯಿತ ಜನಪ್ರತಿನಿಧಿಗಳು ಇಲ್ಲದ ಕೊರತೆ ಒಂದೆಡೆಯಾದರೆ, ಪುರಸಭೆ ಕಚೇರಿಯಲ್ಲಿ ಅಧಿಕಾರಿ, ಸಿಬ್ಬಂದಿಯಿAದ ಸೂಕ್ತ ಸ್ಪಂದನೆ ಇಲ್ಲದೆ ಪರಿತಪಿಸುತ್ತಿದ್ದಾರೆ.

ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ವರಮಾನ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿದ್ದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕೊಡಗಿನಲ್ಲಿ ಮಾದರಿ ಗ್ರಾಮ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿತ್ತು. 23 ಸದಸ್ಯರನ್ನು ಹೊಂದಿದ್ದ ಈ ಪಂಚಾಯತಿ ಜಿಲ್ಲೆಯ ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿಯಾಗಿಯೂ ಗುರುತಿಸಿಕೊಂಡಿತ್ತು. ಉತ್ತಮ ಕಾರ್ಯ ನಿರ್ವಹಣೆಗಾಗಿ 1 ಕೋಟಿ ರೂ. ಮೊತ್ತದ ನಗದು ಪುರಸ್ಕಾರ ಒಳಗೊಂಡ ರಾಷ್ಟçಪ್ರಶಸ್ತಿಯನ್ನು ಈ ಪಂಚಾಯಿತಿ ಪಡೆದುಕೊಂಡಿತ್ತು. ಅಷ್ಟರಲ್ಲಾಗಲೇ ಪಕ್ಕದಲ್ಲೇ ಪಟ್ಟಣ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕುಶಾಲನಗರವನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಚಿಂತನೆ ಮೊಳಕೆ ಒಡೆದಾಗ ಜನಪ್ರತಿನಿಧಿಗಳು, ಅಧಿಕಾರಿಗಳ ಕಣ್ಣು ಈ ಗ್ರಾಮ ಪಂಚಾಯಿತಿ ಕಡೆಗೆ ಬಿತ್ತು.

ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೆ ಏರಲು ಅಗತ್ಯವಿರುವ ಜನಸಂಖ್ಯೆಯ ಮಾನದಂಡವನ್ನು ಪೂರೈಸಲು ಮುಳ್ಳುಸೋಗೆ ಗ್ರಾ.ಪಂ.ಗೆ ಸೇರಿದ ಎಲ್ಲಾ ಪ್ರದೇಶ, ಗುಡ್ಡೆಹೊಸೂರು ಗ್ರಾ.ಪಂ.ಗೆ ಒಳಪಟ್ಟ ಮಾದಾಪಟ್ಟಣ ಗ್ರಾಮದ ಭಾಗಶಃ ಪ್ರದೇಶಗಳನ್ನು ಕುಶಾಲನಗರ ಪುರಸಭೆ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳಲಾಯಿತು. 2011ರ ಜನಗಣತಿ ಪ್ರಕಾರ ಕುಶಾಲನಗರದ ಜನಸಂಖ್ಯೆ 15,326 ಇದ್ದರೆ, ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ 9,189 ಹಾಗೂ ಗುಡ್ಡೆಹೊಸೂರು ಗ್ರಾ.ಪಂ.ನ ಮಾದಾಪಟ್ಟಣ ಪ್ರದೇಶದಲ್ಲಿ 2,861ರಷ್ಟು ಜನಸಂಖ್ಯೆ ದಾಖಲಾಗಿದೆ. ಇದಲ್ಲದೆ ಮಾದಾಪಟ್ಟಣ ಗ್ರಾಮ ವ್ಯಾಪ್ತಿಯಲ್ಲಿ ಶೇ. 10ಕ್ಕಿಂತಲೂ ಕಡಿಮೆ ಮತ್ತು ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶೇ. 15ಕ್ಕಿಂತಲೂ ಕಡಿಮೆ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆ ನಡೆಯುತ್ತಿರುವುದೂ ಕುಶಾಲನಗರ ಪುರಸಭೆಗೆ ಸೇರ್ಪಡೆ ಆಗುವುದಕ್ಕೆ ಪೂರಕ ಆಯಿತು.

ಕುಶಾಲನಗರ ಪುರಸಭೆಗೆ ಮುಳ್ಳುಸೋಗೆ ಗ್ರಾ.ಪಂ. ಸೇರುವುದನ್ನು ಆರಂಭದಲ್ಲಿ ಮುಳ್ಳುಸೋಗೆಯ ಕೆಲವು ಗ್ರಾ.ಪಂ. ಸದಸ್ಯರು ತೀವ್ರವಾಗಿ ವಿರೋಧಿಸಿದ್ದರು. ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತಿದ್ದರು. ಅಂಥವರನ್ನು ಆಗ ವಿಲನ್‌ಗಳ ರೀತಿಯಲ್ಲಿ ನೋಡಲಾಗಿತ್ತು. ಕೊನೆಗೊಮ್ಮೆ ಮುಳ್ಳುಸೋಗೆ ವ್ಯಾಪ್ತಿಯ ಜನಪ್ರತಿನಿಧಿಗಳು, ಪ್ರಮುಖರನ್ನು ಸೇರಿಸಿ ಸಭೆ ನಡೆಸುವ ಮೂಲಕ ಅವರನ್ನು ಮನವೊಲಿಸುವ ಪ್ರಯತ್ನ ನಡೆಸಲಾಯಿತು. ಒಂದೊಮ್ಮೆ ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದರೆ ಇದರ ಜತೆಯಲ್ಲಿರುವ ಮುಳ್ಳುಸೋಗೆಯನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಮಾಡುವ ಮತ್ತು ಗ್ರಾ.ಪಂ.ಗೆ ಆಯ್ಕೆ ಆಗಿ ಅಧಿಕಾರ 'ತ್ಯಾಗ' ಮಾಡುತ್ತಿರುವ ಸದಸ್ಯರುಗಳಿಗೆ ಪುರಸಭೆಯಲ್ಲಿ ಉತ್ತಮ ಸ್ಥಾನಮಾನ ನೀಡುವ ಭರವಸೆಯನ್ನೂ ಕೊಡಲಾಗಿತ್ತು.

ಅಂದಿನ ಜನಪ್ರತಿನಿಧಿಗಳು, ಅಧಿಕಾರಿಗಳ ಬಣ್ಣದ ಮಾತಿಗೆ ಮರುಳಾಗಿ ಮುಳ್ಳುಸೋಗೆ ಗ್ರಾಮಸ್ಥರು ದೊಡ್ಡ ನಿರೀಕ್ಷೆಯೊಂದಿಗೆ ಕುಶಾಲನಗರ ಪುರಸಭೆಗೆ ಸೇರ್ಪಡೆ ಆಗಲು ಒಪ್ಪಿಕೊಂಡಿದ್ದರು. ಇದೀಗ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಪುರಸಭೆಯಾಗಿ ಮೇಲ್ದರ್ಜೆಗೇರಿ ಸುಮಾರು ಒಂದು ವರ್ಷ ಕಳೆದಿದೆ. ಆದರೆ ಮುಳ್ಳುಸೋಗೆ ಗ್ರಾಮಸ್ಥರ ನಿರೀಕ್ಷೆಗಳೆಲ್ಲಾ ಹುಸಿಯಾಗಿದ್ದು, ಅನಾಥಭಾವ ಕಾಡಲು ಶುರುವಾಗಿದೆ. ಕುಶಾಲನಗರ ಪುರಸಭೆ ಆದ ಕೂಡಲೇ ಮುಳ್ಳುಸೋಗೆ ಗ್ರಾ.ಪಂ. ಚುನಾಯಿತ ಆಡಳಿತ ಮಂಡಳಿ ರದ್ದಾಗಿದೆ. ಇದರಿಂದಾಗಿ ಚುನಾಯಿತ ಜನಪ್ರತಿನಿಧಿಗಳೂ ಗ್ರಾಮಕ್ಕೆ ಇಲ್ಲದಂತಾಗಿದೆ. ದೈನಂದಿನ ಸ್ವಚ್ಛತಾ ಕಾರ್ಯಗಳನ್ನು ಹೊರತುಪಡಿಸಿದರೆ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಸ್ಥಗಿತವಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಚುನಾಯಿತ ಜನಪ್ರತಿನಿಧಿಗಳು ಇಲ್ಲದಿರುವ ಕಾರಣ ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ.

ಇದೆಲ್ಲದರ ಮಧ್ಯೆ ಕುಶಾಲನಗರ ಪುರಸಭೆ ಆಗಿದ್ದರೂ ಈ ಹಿಂದಿನ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಸಲು ಸರ್ಕಾರ ಮುಂದಾಗಿರುವುದು ಮುಳ್ಳುಸೋಗೆ ಗ್ರಾಮಸ್ಥರ ಸಿಟ್ಟಿನ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಈ ಹಿನ್ನೆಲೆಯಲ್ಲಿ ಈ ಚುನಾವಣೆಗೆ ಮುಳ್ಳುಸೋಗೆ ಗ್ರಾ.ಪಂ. ಮಾಜಿ ಅಧ್ಯಕ್ಷರೊಬ್ಬರು ಹೈಕೋರ್ಟ್ನಿಂದ ತಡೆಯಾಜ್ಞೆಯನ್ನೂ ತಂದಿದ್ದಾರೆ. ಪ.ಪಂ.ಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದಾದರೆ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಅಗತ್ಯ ಏನಿತ್ತು ಎನ್ನುವುದು ಸ್ಥಳೀಯರ ಪ್ರಶ್ನೆ. ಇದರ ಬದಲು ವಾರ್ಡ್ ಪುನರ್ ವಿಗಂಡಣೆ ಮಾಡಿ ಪುರಸಭೆಗೆ ಹೊಸದಾಗಿ ಚುನಾವಣೆ ನಡೆಸಲಿ ಎನ್ನುವ ಒತ್ತಾಯವೂ ಕೇಳಿ ಬರುತ್ತಿದೆ.

ಮುಳ್ಳುಸೋಗೆ ವಿಷಯದಲ್ಲಿ ಒಂದೆಡೆ ರಾಜಕೀಯವಾಗಿ ಪರ-ವಿರೋಧ ಆರೋಪಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆ ಮುಳ್ಳುಸೋಗೆ ಗ್ರಾಮಸ್ಥರು ಪುರಸಭೆಯಲ್ಲಿ ತಮಗೆ ಸಂಬAಧಿಸಿದ ಕೆಲಸಗಳು ಆಗದೆ ಪರಿತಪಿಸುವಂತಾಗಿದೆ. ಪುರಸಭೆ ಕಚೇರಿಯಲ್ಲಿ ತಮ್ಮನ್ನು ಅಧಿಕಾರಿ, ಸಿಬ್ಬಂದಿ ಕಡೆಗಣಿಸುತ್ತಾರೆ ಎನ್ನುವುದು ಮುಳ್ಳುಸೋಗೆ ಗ್ರಾಮಸ್ಥರ ಆರೋಪ. ಬೀದಿ ದೀಪ, ರಸ್ತೆ, ಚರಂಡಿ ದುರಸ್ತಿ ಸೇರಿದಂತೆ ಚಿಕ್ಕಪುಟ್ಟ ಸಮಸ್ಯೆಗಳಿಗೂ ಪುರಸಭೆ ಕಚೇರಿಯಲ್ಲಿ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎನ್ನುವ ದೂರುಗಳು ಮುಳ್ಳುಸೋಗೆ ಗ್ರಾಮಸ್ಥರಿಂದ ಸಾಮಾನ್ಯವಾಗಿ ಕೇಳಿಬರುತ್ತಿದೆ.

ಪ್ರಮುಖವಾಗಿ ಆಸ್ತಿ ದಾಖಲೆಗೆ ಸಂಬAಧಿಸಿದAತೆ ಫಾರಂ ನಂ.3 ಮಾಡಿಕೊಡಲು ಮುಳ್ಳುಸೋಗೆ ಗ್ರಾಮಸ್ಥರನ್ನು ಸತಾಯಿಸಲಾಗುತ್ತಿದೆ ಎನ್ನುವ ದೂರುಗಳಿವೆ. ಆಸ್ತಿ ನೋಂದಣಿ, ಮಾರಾಟ, ದಾನ, ಬ್ಯಾಂಕ್ ಸಾಲ ಸೇರಿದಂತೆ ಹಲವು ವ್ಯವಹಾರಗಳಿಗೆ ಆಸ್ತಿಯ ದಾಖಲೆಯಾಗಿ ಫಾರಂ ನಂ. 3 ಬಳಕೆ ಆಗುತ್ತಿದ್ದು, ಮುಳ್ಳುಸೋಗೆ ಗ್ರಾಮಸ್ಥರಿಗೆ ಪಾರಂ ನಂ. 3 ಕೊಡಲು ಕುಶಾಲನಗರ ಪುರಸಭೆಯಲ್ಲಿ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ನಮಗೆ ಯಾವುದೇ ವ್ಯವಹಾರ ಮಾಡಲು ಆಗುತ್ತಿಲ್ಲ ಎನ್ನುತ್ತಾರೆ ಮುಳ್ಳುಸೋಗೆ ಗ್ರಾಮಸ್ಥರು. ಮುಳ್ಳುಸೋಗೆ ಗ್ರಾ.ಪಂ.ನಿAದ ಈ ಹಿಂದೆ ಫಾರಂ 9/11, 11 ಎ ಪಡೆದುಕೊಂಡು ಕಾನೂನುಬದ್ಧವಾಗಿ ಎಲ್ಲಾ ದಾಖಲೆಗಳು ಸರಿಯಿರುವ ಆಸ್ತಿಗಳ ಮಾಲೀಕರಿಗೂ ಫಾರಂ ನಂ. 3 ಕೊಡಲು ಪುರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಇದೆ.

ಕುಶಾಲನಗರ ಪುರಸಭೆ ಆದ ಮೇಲೆ ಇದಕ್ಕೆ ಸೇರ್ಪಡೆ ಆಗಿರುವ ಮುಳ್ಳುಸೋಗೆ ಗ್ರಾಮಸ್ಥರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅಗತ್ಯವಾಗಿ ಬೇಕಾದ ಆಸ್ತಿ ದಾಖಲೆಗಳಲ್ಲಿ ಒಂದಾಗಿರುವ ಫಾರಂ ನಂ.3 ಮುಳ್ಳುಸೋಗೆ ಗ್ರಾಮಸ್ಥರಿಗೆ ಪುರಸಭೆಯಿಂದ ಸಿಗುತ್ತಿಲ್ಲ. ಎಲ್ಲಾ ದಾಖಲೆಗಳು ಸರಿಯಿದ್ದರೂ ಫಾರಂ ನಂ. 3 ನಿರಾಕರಿಸಲಾಗುತ್ತಿದೆ. ಈ ಸಂಬAಧ ಸುಮಾರು 2 ಸಾವಿರ ಅರ್ಜಿಗಳು ಇಲ್ಲಿ ಪೆಂಡಿAಗ್ ಇದೆ.
ಎಸ್.ಕೆ. ಮಂಜುನಾಥ್, ವಕೀಲರು, ಕುಶಾಲನಗರ

ಫಾರA ನಂ.3 ವಿತರಣೆ ಕೇವಲ ಕುಶಾಲನಗರದಲ್ಲಿ ಮಾತ್ರ ಸಮಸ್ಯೆ ಅಲ್ಲ. ರಾಜ್ಯಾದ್ಯಂತ ಈ ಸಮಸ್ಯೆ ಇದೆ. ಇನ್ನು 15-30 ದಿನಗಳಲ್ಲಿ ಈ ಸಮಸ್ಯೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಆಗಲಿದೆ. ಫಾರಂ ನಂ.3 ನಿರೀಕ್ಷೆಯಲ್ಲಿ ಇರುವವರು ಸಮಸ್ಯೆ ಸರಿ ಆಗುವ ತನಕ ಕಾಯಬೇಕಾಗುತ್ತದೆ. ನಂತರ ನಮ್ಮಲ್ಲಿ ವಿಶೇಷ ಕಾರ್ಯಕ್ರಮ ಮಾಡಿ ಅಗತ್ಯ ಇರುವವರಿಗೆ ಒಂದು ಪೈಸೆಯೂ ಖರ್ಚು ಆಗದಂತೆ ಫಾರಂ ನಂ.3 ವಿತರಣೆ ಮಾಡಲಾಗುವುದು.
ಕೃಷ್ಣಪ್ರಸಾದ್, ಮುಖ್ಯಾಧಿಕಾರಿ, ಪುರಸಭೆ, ಕುಶಾಲನಗರ

ಈಗಿನ ಅಂದಾಜಿನ ಪ್ರಕಾರ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ಸಾವಿರ ಜನಸಂಖ್ಯೆ ಇದೆ. ಈ ಹಿನ್ನೆಲೆಯಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಲಿ. ಇಲ್ಲವಾದಲ್ಲಿ ಕುಶಾಲನಗರ ಪುರಸಭೆಗೆ ಹೊಸದಾಗಿ ಚುನಾವಣೆ ನಡೆಸಲಿ. ಈ ಸಂಬAಧ ಜಿಲ್ಲಾಧಿಕಾರಿಗಳ ಕಚೇರಿ, ಪುರಸಭೆ ಹಾಗೂ ಶಾಸಕರ ಕಚೇರಿ ಮುಂದೆ ಮುಳ್ಳುಸೋಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಬೇಕಾಗುತ್ತದೆ.
ಸಿ.ಎಂ. ಆಸಿಫ್, ಮಾಜಿ ಸದಸ್ಯ, ಗ್ರಾ.ಪಂ. ಮುಳ್ಳುಸೋಗೆ

ಮುಳ್ಳುಸೋಗೆ ಗ್ರಾಮವನ್ನು ಅಭಿವೃದ್ಧಿ ದೃಷ್ಟಿಯಿಂದ ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪ ಸರಿಯಲ್ಲ. ಹಾಲಿ ಅಸ್ತಿತ್ವದಲ್ಲಿ ಇರುವ ಕುಶಾಲನಗರ ಪ.ಪಂ. ಚುನಾಯಿತ ಪ್ರತಿನಿಧಿಗಳ ಅವಧಿ ಕೊನೆಗೊಳ್ಳುವ ತನಕ ಅವರ ಅಧಿಕಾರ ಮೊಟಕುಗೊಳಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಕೆಲವರು ಹಾಲಿ ಶಾಸಕರ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ.
ವಿ.ಪಿ. ಶಶಿಧರ್, ಅಧ್ಯಕ್ಷ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಕುಶಾಲನಗರ ತಾಲೂಕು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net